ಹೆಣ್ಣಿನ ಭಾವನೆಯ ಸುತ್ತ “ರವಿಕೆ ಪ್ರಸಂಗ” ಫೆ.16ಕ್ಕೆ ಕರ್ನಾಟಕದಾದ್ಯಂತ ಬಿಡುಗಡೆ

ಉಡುಪಿ: “ಸಿನಿಮಾ ಕಥೆಯ ಮೂಲಕ ಕೇವಲ ಮನರಂಜನೆ ಹಾಗೂ ಸಂದೇಶ ನೀಡಿದರೆ ಸಾಲದು,
ನೋಡಿದವರಿಗೆ ಆ ಚಿತ್ರ ತಮ್ಮದೆ, ತಮ್ಮ ಬದುಕಿನ ಭಾಗ ಎನ್ನುವ ಭಾವನೆ ಮೂಡಬೇಕು.ಸಾಮಾನ್ಯವಾಗಿ ರವಿಕೆ ಅಂದ ತಕ್ಷಣ ಅದರ ಬಗ್ಗೆ ಗಂಭೀರ ಚಿಂತನೆಗಿಂತ ಹತ್ತು ಹಲವು ಹಾಸ್ಯಾಸ್ಪದವಾದ ಭಾವನೆ ಬಹುತೇಕರಲ್ಲಿ ಸಹಜವಾಗಿ ಮೂಡುತ್ತದೆ. ಆದರೆ ಆ
ರವಿಕೆಯಿಂದಲೇ ರವಿಕೆಯೊಳಗಿನ ಮನಸ್ಸಿನ ಭಾವನೆಯನ್ನು ಅನಾವರಣಗೊಳಿಸಿ, ಸಮಾಜದಲ್ಲಿ ಅದೆಷ್ಟೋ ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವ ಹಾಗೂ ಇಂತಹ ಸ್ಥಿತಿಯನ್ನು ಅನುಭವಿಸಿರುವ ಮಹಿಳೆಯರ ಭಾವನೆಗೆ ಈ ಸಿನಿಮಾ ಮೂಲಕ ಬಣ್ಣ
ತುಂಬಬೇಕು ಎನ್ನುವ ಹಂಬಲದಿಂದ ರವಿಕೆ ಪ್ರಸಂಗ ಸಿನಿಮಾ ಮಾಡಲಾಗಿದೆ. ಜನರು ಖಂಡಿತ ಸಿನಿಮಾ ಮೆಚ್ಚುತ್ತಾರೆ ಎಂಬ ವಿಶ್ವಾಸವಿದೆ” ಎಂದು ರವಿಕೆ ಪ್ರಸಂಗ ಸಿನಿಮಾದ ನಿರ್ದೇಶಕ ಸಂತೋಷ್ ಕೊಡಂಕೇರಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

“ಮದ್ಯಮ ವರ್ಗದ ಕುಟುಂಬವೊಂದು ಗ್ರಾಮೀಣ ಸೊಗಡಿನಲ್ಲಿ ಇರುವ ವಾತಾವರಣ, ಸ್ಥಳೀಯ ಸಂಸ್ಕೃತಿ, ಸಂಪುದಾಯದ ಜೊತೆಗೆ ಹಾಸ್ಯದ ಸ್ಪರ್ಷವನ್ನು ದಕ್ಷಿಣ ಕರ್ನಾಟಕದ ಭಾಷೆಯನ್ನೆ ವಿಭಿನ್ನವಾಗಿ ತೋರಿಸುವ ಮೂಲಕ ಭಾಷಾ ಹಾಗೂ ಆಹಾರ ಸಂಸ್ಕೃತಿಯನ್ನು ಕೂಡ ರವಿಕೆ ಪಸಂಗದಲ್ಲಿ ಸೂಕ್ಷ್ಮವಾಗಿ ತೋರಿಲಾಗಿದೆ. ಒಬ್ಬ ಟೈಲರ್
ಅಂಗಡಿಯಿಂದ ಆರಂಭವಾದ ಈ ರವಿಕೆ ಪುಸಂಗ ಕೋರ್ಟ್ ಮೆಟ್ಟಿಲೇರಿದಾಗ ಅದಕ್ಕೆ ಸಮಾಜ ಹೆಣ್ಣನ್ನು ನೋಡುವ ಪರಿಯೇ ಈ ಚಿತ್ರದ ಎಳೆಯಾಗಿದೆ” ಎಂದವರು ಮಾಹಿತಿ ನೀಡಿದರು.

ಬಳಿಕ ಮಾತಾಡಿದ ಚಿತ್ರದ ನಾಯಕಿ ಗೀತಾ ಭಾರತಿ ಭಟ್ ಅವರು, “ಈ ಚಿತ್ರದ ಕಥೆ ದಕ್ಷಿಣ ಕನ್ನಡದ ಒಂದು ಹಳ್ಳಿಯಲ್ಲಿ ನಡೆಯುತ್ತದೆ. ಈ ಹಳ್ಳಿಯಲ್ಲಿ ಚಿತ್ರದ ನಾಯಕಿ ‘ಸಾನ್ವಿ’ ಅವಳ ಚಿಕ್ಕ ಕುಟುಂಬದ ಜೊತೆಗೆ ಇರುತ್ತಾಳೆ. ಅವಳು 28 ವರ್ಷ ವಯಸ್ಸಿನ ಹುಡುಗಿಯಾಗಿದ್ದು, ಈಗಾಗಲೇ ಅವಳಿಗೆ ಸಾಕಷ್ಟು ಮದುವೆ ಸಂಬಂಧಗಳು ಬಂದಿದ್ದರೂ ಯಾವುದೇ ಸಂಬಂಧಗಳು ಅವಳಿಗೆ ಸರಿಯಾಗಿರುವುದಿಲ್ಲ.
ಸಾನ್ವಿ ಮದುವೆಯಾಗಲು ಒಬ್ಬ ಸುಂದರವಾದ ಹುಡುಗನನ್ನು ಹುಡುಕುತ್ತಿರುತ್ತಾಳೆ. ಅವಳ
ಮನೆಯವರು ಕೂಡ ಅವಳಿಗೆ ಬೇಗ ಮದುವೆ ಮಾಡಬೇಕು ಎಂಬ ಯೋಚನೆಯಲ್ಲಿರುತ್ತಾರೆ.
ಎಷ್ಟೋ ಸಂಬಂಧಗಳಿಂದ ತಿರಸ್ಕರಿಸಲ್ಪಟ್ಟ ಸಾನ್ವಿಗೆ ಈ ಬಾರಿ ಒಂದು ಫಾರಿನ್ ಪ್ರಪೋಸಲ್ ಬರುತ್ತದೆ. ಈ ವೇಳೆ ರವಿಕೆ ಹೊಲಿಯಲು ಕೊಡುವಲ್ಲಿಂದ ಸಿನಿಮಾ ಆರಂಭಗೊಂಡು ಕೋರ್ಟ್ ಮೆಟ್ಟಿಲು ಹತ್ತುತ್ತದೆ. ಕೊನೆಗೆ ಒಳ್ಳೆಯ ಸಂದೇಶದೊಂದಿಗೆ ಸಿನಿಮಾ ಮುಕ್ತಾಯವಾಗುತ್ತದೆ” ಎಂದು ಹೇಳಿದರು.

ಬಳಿಕ ಮಾತಾಡಿದ ರಘು ಪಾಂಡೇಶ್ವರ ಅವರು, “ರವಿಕೆ ಪ್ರಸಂಗ ಸಿನಿಮಾ ಜನಸಾಮಾನ್ಯರಿಗೆ ಹತ್ತಿರವಾಗುವ ಸಿನಿಮಾ. ಇದರಲ್ಲಿ ನಟಿಸುವಾಗ ತುಂಬಾನೇ ಎಂಜಾಯ್ ಮಾಡಿದ್ದೇವೆ. ಒಂದೊಳ್ಳೆ ಸಬ್ಜೆಕ್ಟ್ ಇಟ್ಟುಕೊಂಡು ಸಿನಿಮಾ ಮಾಡಿದ್ದು ಪ್ರೀಮಿಯರ್ ಶೋ ವೀಕ್ಷಿಸಿದ ಜನರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದು ನಮಗೆ ಹೆಚ್ಚಿನ ಬಲ ತುಂಬಿದ್ದು ಸಿನಿಮಾ ಪ್ರೇಮಿಗಳಿಗೆ ಖಂಡಿತ ನಿರಾಸೆ ಹುಟ್ಟಿಸುವುದಿಲ್ಲ. ಎಲ್ಲರೂ ಫೆ.16ರಂದು ಸಿನಿಮಾ ಮಂದಿರಕ್ಕೆ ಹೋಗಿ ಸಿನಿಮಾ ನೋಡಿ ನಮ್ಮನ್ನು ಪ್ರೋತ್ಸಾಹಿಸಿ” ಎಂದರು.

ಚಿತ್ರದ ತಾರಾಗಣದಲ್ಲಿ ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಹನುಮಂತೇ ಗೌಡ, ಖುಷಿ ಆಚಾರ್, ಹನುಮಂತ್ ರಾವ್ ಕೆ. ಇರಲಿದ್ದಾರೆ.
ದೃಷ್ಟಿ ಮೀಡಿಯಾ ಪ್ರೊಡಕ್ಷನ್ ನಡಿಯಲ್ಲಿ ಸಿನಿಮಾ ತಯಾರಾಗಿದೆ.

Leave a Reply

Your email address will not be published. Required fields are marked *

error: Content is protected !!