ಕುಂದಾಪುರ: ಯುವತಿಗೆ ರೂ.30 ಲಕ್ಷಕ್ಕೂ ಹೆಚ್ಚಿನ ನಗದು, ಚಿನ್ನಾಭರಣ ವಂಚಿಸಿದ ಚಿಕ್ಕಮ್ಮ

ಕುಂದಾಪುರ ಫೆ.8(ಉಡುಪಿ ಟೈಮ್ಸ್ ವರದಿ): ಲಕ್ಷಾಂತರ ರೂ ವಂಚಿಸಿದ ಚಿಕ್ಕಮ್ಮನ ವಿರುದ್ಧ ಯುವತಿಯೊಬ್ಬರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಕುಂದಾಪುರದ ಹಂಗಳೂರು ಗ್ರಾಮದ ಪೂಜಾ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೂಜಾ ಅವರು 2 ವರ್ಷದ ಮಗು ಆಗಿದ್ದಾಗ ಅವರ ತಾಯಿ ಗೀತಾರವರು ಮೃತಪಟ್ಟಿದ್ದರು. ಆ ಸಮಯ ಗೀತಾರವರ ಹತ್ತಿರ ಇದ್ದ 10 ಲಕ್ಷ ಹಣ ಮತ್ತು 350 ರಿಂದ 400 ಗ್ರಾಂನಷ್ಟು ಚಿನ್ನಾಭರಣಗಳನ್ನು ಪೂಜಾ ಅವರಿಗೆ ನೀಡಲಾಗಿತ್ತು. ಆದರೆ ಪೂಜಾ ಅವರು ಅಪ್ರಾಪ್ತರಾಗಿದ್ದರಿಂದ ಅವರ ಅಜ್ಜಿ ಸಾಧು ಯಾನೆ ಶಾರದ ಮತ್ತು ಚಿಕ್ಕಮ್ಮಂದಿರಾದ ಸವಿತಾ ಹಾಗೂ ಸುನೀತಾರವರು ನೋಡಿಕೊಳ್ಳುತ್ತಿದ್ದರು. ಈ ನಡುವೆ 150 ಗ್ರಾಂ ಚಿನ್ನದ ಆಭರಣಗಳು ಸೇರಿದಂತೆ ಗೀತಾರವರ ಹತ್ತಿರ ಇದ್ದ ಸುಮಾರು 10,00,000/- ರೂಪಾಯಿ ಹಣ ಮತ್ತು 350 ರಿಂದ 400 ಗ್ರಾಂನಷ್ಟು ಚಿನ್ನಾಭರಣಗಳನ್ನು ಆರೋಪಿತರು ತಮ್ಮ ಬಳಿ ಇಟ್ಟುಕೊಂಡಿದ್ದರು.

ಆ ನಂತರ ಸಾಧುರವರು ಆರೋಪಿತೆಯಾದ ಸುನೀತಾ ರವರಲ್ಲಿ 10,00,000/- ರೂಪಾಯಿನ್ನು ಪೂಜಾ ಅವರ ಹೆಸರಿಗೆ ಡಿಪಾಸಿಟ್ ಇಡುವಂತೆ ಹೇಳಿದ್ದರು. ಆದರೆ ಆರೋಪಿತೆಯು ಮೋಸ ಮಾಡುವ ಉದ್ದೇಶದಿಂದ ನಗದು ಹಾಗೂ ಚಿನ್ನಾಭರಣಗಳನ್ನು 2011 ರ ಸೆ.12 ರಂದು ತನ್ನ ಸ್ವಂತ ಹೆಸರಿಗೆ ಫಿಕ್ಸೆಡ್ ಡಿಪಾಸಿಟ್ ಇಟ್ಟು ಪೂಜಾ ಅವರಿಗೆ 6,00,000/- ರೂಪಾಯಿ ರಸೀದಿ ಮಾತ್ರ ನೀಡಿರುತ್ತಾರೆ. ಅಲ್ಲದೆ ಪೂಜಾ ಅವರು ಪ್ರೌಢಶಾಲೆಗೆ ಹೋಗುವ ಸಮಯದಲ್ಲಿ ಆರೋಪಿತರು ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು, ವಿಷ ಆಹಾರ ನೀಡಿ ಕೊಲ್ಲಲು ಪ್ರಯತ್ನಿಸಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಹಾಗೂ ಪೂಜಾ ಅವರ ಅಜ್ಜಿ ಸಾಧುರವರ ಮರಣದ ನಂತರ ಎಲ್ಲಾ ಚಿನ್ನಾಭರಣ ಹಾಗೂ ಹಣವನ್ನು ಆರೋಪಿತರು ವಶಪಡಿಸಿಕೊಂಡು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!