ಶಾಲೆಗೆ‌ ರಜೆ ಸಿಗಬೇಕೆಂದು 8ನೇ ತರಗತಿ ವಿದ್ಯಾರ್ಥಿ ಮಾಡಿದ್ದೇನು ಗೊತ್ತಾ…?

ಶಾಲೆಯೊಂದರಿಂದ ನಾಪತ್ತೆಯಾಗಿದ್ದ ಒಂದನೇ ತರಗತಿ ವಿದ್ಯಾರ್ಥಿ ಎರಡು ದಿನಗಳ ನಂತರ ಶಾಲೆಯ ಬಳಿಯ ಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ತನಿಖೆಯ ವೇಳೆ ಆತನ ಶಾಲೆಯ ಹಿರಿಯ ವಿದ್ಯಾರ್ಥಿಯೇ ಬಾಲಕನ ಕೊಲೆ ಮಾಡಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ನಡೆದಿದೆ.

ಜನವರಿ 30ರಂದು ಖಾಸಗಿ ಶಾಲೆಯೊಂದರಲ್ಲಿ ಊಟದ ವಿರಾಮದ ವೇಳೆ ಒಂದನೇ ತರಗತಿ ವಿದ್ಯಾರ್ಥಿ ನಾಪತ್ತೆಯಾಗಿದ್ದ ಎನ್ನಲಾಗಿದೆ. ಭಾರೀ ಹುಡುಕಾಟದ ಬಳಿಕ ಎರಡು ದಿನಗಳ ನಂತರ ಶಾಲೆಯಿಂದ 400 ಮೀಟರ್ ದೂರದಲ್ಲಿರುವ ಕೊಳದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕನ ತಲೆಗೆ ಪೆಟ್ಟು ಬಿದ್ದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪೊಲೀಸರು ಸಾವಿನ ತನಿಖೆಯನ್ನು ಪ್ರಾರಂಭಿಸಿದಾಗ, ಸುಳಿವುಗಳು ಅದೇ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಯ ಪಾತ್ರವನ್ನು ತೋರಿಸಿದವು ಎಂದು ತಿಳಿದು ಬಂದಿದೆ.

ಕಿರಿಯ ಬಾಲಕ ನಾಪತ್ತೆಯಾದ ನಂತರ ಎಂಟನೇ ತರಗತಿ ವಿದ್ಯಾರ್ಥಿ ಶಾಲೆಗೆ ಗೈರು ಹಾಜರಾಗಿದ್ದರಿಂದ ಆತನ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಬಳಿಕ ಆತನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಬಾಲಕನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆಗೆ ಕಾರಣ ಅತ್ಯಂತ ಆಘಾತಕಾರಿಯಾ ಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ರಜೆ ಬೇಕು ಎಂಬ ಕಾರಣಕ್ಕೆ ಬಾಲಕ ಒಂದನೇ ತರಗತಿ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದಾನೆ. ಶಾಲೆಯಲ್ಲಿನ ಸಾವಿನಿಂದ ಒಂದು ರಜೆ ಸಿಗಬಹುದು ಎನ್ನುವ ಕಾರಣಕ್ಕೆ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ.

ಹಾಸ್ಟೆಲ್ ನಲ್ಲಿ ವಾಸಿಸುವ ಬಾಲಕ, ಶಾಲೆಗೆ ಒಂದು ದಿನ ರಜೆ ಪಡೆದು ಮನೆಗೆ ಮರಳಲು ಬಯಸಿದ್ದ ಎಂದು ಪುರುಲಿಯಾ ಪೊಲೀಸ್ ವರಿಷ್ಠಾಧಿಕಾರಿ ಅಭಿಜಿತ್ ಬ್ಯಾನರ್ಜಿ ತಿಳಿಸಿದ್ದಾರೆ.

ಎಂಟನೇ ತರಗತಿಯ ವಿದ್ಯಾರ್ಥಿಯು ಒಂದು ವಾರದ ಹಿಂದಷ್ಟೇ ಹಾಸ್ಟೆಲ್‌ಗೆ ತೆರಳಿದ್ದ ಎಂದು ತಿಳಿದು ಬಂದಿದೆ. ಕಿರಿಯ ಬಾಲಕನನ್ನು ಕೆರೆಗೆ ಕರೆದೊಯ್ದು, ತಲೆಗೆ ಹೊಡೆದು ಕೆರೆಗೆ ಎಸೆದಿದ್ದಾನೆ ಎನ್ನಲಾಗಿದೆ.

“ಹುಡುಗನು ಇತ್ತೀಚೆಗಷ್ಟೇ ಹಾಸ್ಟೆಲ್‌ಗೆ ಬಂದಿದ್ದಾನೆ. ನಾವು ಆತನಲ್ಲಿ ಅಸಹಜ ವರ್ತನೆಗಳನ್ನೇನೂ ಕಂಡಿರಲಿಲ್ಲ. ಅವನ ಬಗ್ಗೆ ಹೆಚ್ಚೇನೂ ತಿಳಿದಿಲ್ಲ” ಎಂದು ಶಾಲೆಯ ಮುಖ್ಯ ಶಿಕ್ಷಕ ಯುಧಿಷ್ಠಿರ್ ಮಹತೋ ಹೇಳಿದರು.

“ಈ ಹುಡುಗನೇ ಹೊಣೆಗಾರನೆಂದು ತನಿಖೆಯಿಂದ ಸ್ಪಷ್ಟವಾಗಿದೆ. ನಾವು ಆರಂಭದಲ್ಲಿ ಅವನು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಭಾವಿಸಿದ್ದೆವು. 8 ನೇ ತರಗತಿಯ ಹುಡುಗ ಊಟದ ವಿರಾಮದ ನಂತರ ನಾಪತ್ತೆಯಾಗಿದ್ದನು ಎಂದು ತಿಳಿಯಿತು. ತನಿಖೆ ಮಾಡಿದಾಗ ಆಘಾತಕಾರಿ ಅಂಶ ಹೊರ ಬಂತು ಅವನು ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ” ಎಂದು ಮುಖ್ಯೋಪಾಧ್ಯಾಯರು ಹೇಳಿದರು.

Leave a Reply

Your email address will not be published. Required fields are marked *

error: Content is protected !!