ಉಡುಪಿ: ಫೆ.10-11 ವಕೀಲರ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ಕಲಾ ಸಂಭ್ರಮ’

ಉಡುಪಿ: ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯದ ವಿವಿಧ ವಕೀಲರ ಸಂಘಗಳ ಸದಸ್ಯರಿಗಾಗಿ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ “ಕಲಾ ಸಂಭ್ರಮ’ವನ್ನು ಫೆ. 10 ಮತ್ತು 11ರಂದು ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಿರ್ಮಿಸಿರುವ ತೆರೆದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಫೆ.10ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಮ್. ಜೋಷಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಗೌರವ ಅತಿಥಿಯಾಗಿ, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದರು.
ಅಂದು ಸಂಜೆ 5 ಗಂಟೆಗೆ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ “ಸಾಂಸ್ಕೃತಿಕ ವೈಭವ” ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯದ ವಿವಿಧ ವಕೀಲರ ಸಂಘಗಳ 20 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಸ್ಪರ್ಧಾ ಕೂಟದ ಸಮಗ್ರ ವಿಜೇತ ತಂಡಕ್ಕೆ 33,333 ನಗದು ಮತ್ತು ಶಾಶ್ವತ ಫಲಕ, ಸಮಗ್ರ ರನ್ನರ್ ಅಪ್ ತಂಡಕ್ಕೆ ರೂ. 22,222- ನಗದು ಮತ್ತು ಶಾಶ್ವತ ಫಲಕ ಹಾಗೂ ತೃತೀಯ ಸಮಗ್ರ ತಂಡಕ್ಕೆ ರೂ. 11,111 ನಗದು ಮತ್ತು ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಮಾರೋಪ ಸಮಾರಂಭ:
ಸ್ಪರ್ಧಾ ಕೂಟದ ಸಮಾರೋಪ ಸಮಾರಂಭವು ಫೆ. 11ರಂದು ಸಂಜೆ 6.30ಕ್ಕೆ ನಡೆಯಲಿದ್ದು, ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಮಾರೋಪ ಭಾಷಣ ಮಾಡಲಿದ್ದಾರೆ. ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರಾಜೇಶ ಎ.ಆ‌ರ್., ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮೂಡುಬೆಳ್ಳೆ, ಕ್ರೀಡಾ ಕಾರ್ಯದರ್ಶಿ ಸುಮಿತ್ ಎಸ್. ಹೆಗ್ಡೆ, ಖಜಾಂಚಿ ಗಂಗಾಧರ ಎಚ್.ಎಮ್., ಆನಂದ ಮಡಿವಾಳ, ಆರೂರ್ ಸುಕೇಶ್ ಶೆಟ್ಟಿ, ಸತೀಶ್ ಪೂಜಾರಿ ಮತ್ತು ರವೀಂದ್ರ ಬೈಲೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!