ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಯ್ದರೆ ಹೇಗೆ? ಕಾನೂನಾತ್ಮಕವಾಗಿ ತೆರಿಗೆ ಹಂಚಿಕೆಯಾಗಲಿ: ಸಿಎಂ ಸಿದ್ದರಾಮಯ್ಯ

ನವದೆಹಲಿ: ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ನಿರಂತರವಾಗಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರದ ತಾರತಮ್ಯ ನೀತಿ ಮತ್ತು ಮಲತಾಯಿ ಧೋರಣೆಯನ್ನು ಖಂಡಿಸಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಗುಡುಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯಸಂಪುಟದ ಎಲ್ಲ ಸಚಿವರು, ಕಾಂಗ್ರೆಸ್ ಪಕ್ಷದ ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. 

ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನ: ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ, ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ನಿಜವಾಗಿ ಹೇಳುವುದಾದರೆ, ಈ ವರ್ಷ ಕರ್ನಾಟಕವು 4.30 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ತೆರಿಗೆಯನ್ನು ನೀಡುತ್ತಿದೆ. ನಾವು 100 ರೂಪಾಯಿಗಳನ್ನು ತೆರಿಗೆಯಾಗಿ ಸಂಗ್ರಹಿಸಿ ಭಾರತ ಸರ್ಕಾರಕ್ಕೆ ನೀಡಿದರೆ, ನಮಗೆ ಕೇವಲ 12-13 ರೂಪಾಯಿಗಳನ್ನು ನಮಗೆ ವಾಪಸ್ ನೀಡುತ್ತಿದೆ. ಅದು ನಮಗೆ ಸಿಗುತ್ತಿರುವ ಹಂಚಿಕೆಯಾಗಿದ್ದು ಇದು ನಮಗಾಗುತ್ತಿರುವ ಅನ್ಯಾಯವಲ್ಲವೇ ಎಂದು ಕೇಳಿದರು.

ತಮ್ಮ ಭಾಷಣದಲ್ಲಿ ಮೋದಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ, ಜಿಎಸ್ ಟಿ ಹಾಗೂ ಕೇಂದ್ರ ಬಜೆಟ್‌ನ ಅಂಕಿ-ಅಂಶಗಳನ್ನು ಪ್ರಸ್ತಾಪ ಮಾಡಿದರು. ಈಗ ಬಜೆಟ್ ಗಾತ್ರ 45 ಲಕ್ಷ ಕೋಟಿ ರೂಪಾಯಿ ಇದೆ. ಈಗ ಹಿಂದೆಂದಿಗಿಂತಲೂ ಬಜೆಟ್ ಗಾತ್ರ ಹೆಚ್ಚಾಗಿದೆ. ಆದರೆ ನಮ್ಮ ರಾಜ್ಯಕ್ಕೆ ಎಷ್ಟು ಕೊಟ್ಟಿದ್ದಾರೆ. ಜಿಎಸ್ ಟಿಯಲ್ಲಿ ಎಷ್ಟು ನಷ್ಟವಾಗಲಿದೆ ಅಷ್ಟನ್ನು ಭರಿಸುವುದಾಗಿ ಹೇಳಿದ್ದರು.

ಜಿಎಸ್‌ಟಿಯಲ್ಲಿ ನಮಗೆ ಅನ್ಯಾಯವಾಗಿಲ್ವಾ. ಜಿಎಸ್‌ಟಿಯಲ್ಲಿ ನಷ್ಟವಾದರೂ ತೆರಿಗೆಯಲ್ಲಿ ಹೆಚ್ಚಾಗಲಿದೆ ಅಂತ ಹೇಳಿದರು. ಅದು ಸುಳ್ಳು, ನಮಗೆ ನಷ್ಟವಾಗಿದೆ. ಇದನ್ನ ಪ್ರತಿಭಟಿಸಬೇಕಾ ಬೇಡವಾ? ಕರ್ನಾಟಕದ ಹೋರಾಟಕ್ಕೆ ಮಿಸ್ಟರ್ ಬಿಜೆಪಿ ನಾಯಕರು ಬರಬೇಕಿತ್ತು. ಬನ್ನಿ ಅಂತಾ ಕರೆದಿದ್ದೆವು ಬಂದಿಲ್ಲ. ನಿಮಗೆ ಕೋಲೆ ಬಸವ ಗೊತ್ತಲ್ಲ. ತಲೆ ಎತ್ತಿ ಕುಣಿಸೋದು, ಇಲ್ಲದಿದ್ದರೆ ತಲೆ ಬಗ್ಗಿಸೋದು. ಬಿಜೆಪಿಯವರು ಈ ರೀತಿ ನಡೆದುಕೊಳ್ತಿದ್ದಾರೆ. ಬಿಜೆಪಿ ನಾಯಕರು ಎಂದೂ ಕೂಡ ಮೋದಿ ಸರ್ಕಾರದ ಮುಂದೆ ಧ್ವನಿ ಎತ್ತಲೇ ಇಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರದಿಂದ ತಾರತಮ್ಯ: ಉತ್ತರ ಭಾರತವನ್ನು ಅಭಿವೃದ್ಧಿ ಮಾಡುವುದಕ್ಕೋಸ್ಕರ ದಕ್ಷಿಣ ಭಾರತವನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ. ನಾಲ್ಕು ಲಕ್ಷ ಮೂವತ್ತು ಸಾವಿರ ಕೋಟಿಯನ್ನ ಕೇಂದ್ರ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕೊಡುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ 100ಕ್ಕೆ ಕೇವಲ 12 ರಿಂದ 13 ರೂಪಾಯಿ ಮಾತ್ರ ಕೊಡುತ್ತಿದೆ. ಕೋಳಿ ಚಿನ್ನದ ಮೊಟ್ಟೆ ಇಡುತ್ತದೆ ಎಂದು ಕೋಳಿಯನ್ನೇ ಕೊಯ್ದರೆ ಏನಾಗುತ್ತದೆ, ಹಸು ಸಾಕಷ್ಟು ಹಾಲು ಕೊಡುತ್ತದೆ ಎಂದು ಹಸುವಿನ ಕೆಚ್ಚಲನ್ನೇ ಕುಯ್ದರೆ ಪರಿಸ್ಥಿತಿ ಏನಾಗುತ್ತದೆ, ಅದೇ ಪರಿಸ್ಥಿತಿ ಇಂದು ಕರ್ನಾಟಕಕ್ಕೆ ಆಗಿದೆ ಎಂದು ಕೇಂದ್ರ ಸರ್ಕಾರವನ್ನು ದೂಷಿಸಿದರು.

Leave a Reply

Your email address will not be published. Required fields are marked *

error: Content is protected !!