ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಆಗಿದೆ: ಸಿಎಂ ಸಿದ್ದರಾಮಯ್ಯ

ಹೊಸದಿಲ್ಲಿ, ಫೆ 7: ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಹೊರತು ಇದು ರಾಜಕೀಯ ಚಳವಳಿ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ದೆಹಲಿಯ ಜಂತರ್ ಮಂತರ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಯೋಜಿಸಿರುವ ʼದೆಹಲಿ ಚಲೋʼ ಪ್ರತಿಭಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಜಕೀಯ ಹೋರಾಟ ಅಲ್ಲ, ಇದು ಕನ್ನಡಿಗರ ಹಿತ ಕಾಪಾಡುವ ಐತಿಹಾಸಿಕ ಚಳುವಳಿಯಾಗಿದ್ದು, ನಮ್ಮ ಎಲ್ಲ ಶಾಸಕರು, ಸಚಿವರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ಸಂಸದರಿಗೂ ಪತ್ರ ಬರೆದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಎಸಗಿದೆ. ಈ ವಿಚಾರದಲ್ಲಿ ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಆಗಿದೆ. ರಾಜ್ಯಕ್ಕಾದ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಸುಮಾರು ಶೇ 40-45 ರಷ್ಟು ತೆರಿಗೆ ಪಾಲು ನಮಗೆ ಬರಬೇಕು. ನಾವು 4 ಲಕ್ಷ 30 ಸಾವಿರ ಕೋಟಿ ತೆರಿಗೆ ಕಟ್ಟುತ್ತಿದ್ದೇವೆ. 100 ರೂ. ತೆರಿಗೆ ಕಟ್ಟಿದ್ದರೆ ಕೇವಲ 12 ರೂಪಾಯಿ ಅಷ್ಟೇ ನಮಗೆ ಬರುತ್ತಿದೆ ಎಂದರು.

ಕರ್ನಾಟಕದಲ್ಲಿ ಬರಗಾಲ ಇದೆ. ಇಷ್ಟು ದೊಡ್ಡಬರಗಾಲ ರಾಜ್ಯದಲ್ಲಿ ಎಂದೂ ಬಂದಿರಲಿಲ್ಲ. 5 ತಿಂಗಳಾದರೂ ಕೇಂದ್ರ ಸರ್ಕಾರ ಇದುವರೆಗೂ ಹಣ ನೀಡಿಲ್ಲ. ನಾವು 17 ಸಾವಿರದ 900 ಕೋಟಿ ರೂಪಾಯಿ ಪರಿಹಾರ ಕೇಳಿದ್ದೆವು. ಮಹಾತ್ಮಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ಕೆಲಸದ ದಿನಗಳನ್ನು 150 ದಿನ ಮಾಡಿ ಅಂತ ಕೇಳಿದೆವು. ಅದನ್ನೂ ಮಾಡಿಲ್ಲ ನಾನೇ ಪ್ರಧಾನಿ ಮೋದಿ ಅವರನ್ನೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಡಿಸೆಂಬರ್ 23 ರಂದು ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ ಅಮಿತ್ ಶಾ ಅವರು, ಏನೂ ಮಾಡಿಲ್ಲ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!