‘ಯಕ್ಷಗಾನ ಜನರನ್ನು ಒಗ್ಗೂಡಿಸುತ್ತದೆ’- ಮುರಲಿ ಕಡೆಕಾರ್

‘ಯಕ್ಷಗಾನ ಜನರಿಗೆ ಮನೋರಂಜನೆ ನೀಡುತ್ತದೆ ಎಂಬುದು ಸರಿ. ಅದಕ್ಕಿಂತ ಮುಖ್ಯವಾಗಿ ಜನರನ್ನು ಒಗ್ಗೂಡಿಸುತ್ತದೆ. ಜನರು ತಮ್ಮ ಅಸ್ಮಿತೆಯನ್ನು ಮರೆತು ಯಕ್ಷಗಾನ ಆವರಣದಲ್ಲಿ ಒಂದಾಗುತ್ತಾರೆ’ ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಹೇಳಿದರು.

ಅವರು ಪುತ್ತೂರು ಪರುಶುರಾಮ ಶೆಟ್ಟಿಯವರು ಅಂಬಲಪಾಡಿಯಲ್ಲಿ ನೂತನವಾಗಿ ನಿರ್ಮಿಸಿದ ‘ಪವಿ’ ಗೃಹಪ್ರವೇಶದ ನಿಮಿತ್ತ 05 ರಂದು ಏರ್ಪಡಿಸಿದ ಕಟೀಲು ಯಕ್ಷಗಾನದ ಸಂದರ್ಭದಲ್ಲಿ ಕಲಾವಿದರ ಸಂಮಾನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ‘ಯಕ್ಷಗಾನದ ಅಭ್ಯುದಯಕ್ಕೆ ಕಲಾವಿದರು ಮುಖ್ಯ, ಸಂಘಟಕರೂ ಮುಖ್ಯ. ಇವತ್ತು ಇಲ್ಲಿ ಯಕ್ಷಗಾನ ಸಂಘಟನೆ ಮಾಡಿದ ಸಹೃದಯರಿಗೆ ಅಭಿನಂದನೆಗಳು ಸಲ್ಲುತ್ತವೆ. ಅವರು ಕಟೀಲು ಮೇಳದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ನಾಲ್ವರು ಕಲಾವಿದರನ್ನು ಸಂಮಾನಿಸಿರುವುದು ಪ್ರಶಂಸನೀಯ’ ಎಂದರು. ಕಟೀಲು ಮೇಳದ ಹಿರಿಯ ಮದ್ದಲೆಗಾರರಾದ ಚಿಪ್ಪಾರು ಮರಿಯಯ್ಯ ಬಲ್ಲಾಳ, ಹಿರಿಯ ಹಾಸ್ಯಗಾರ, ಲೇಖಕ ರವಿಶಂಕರ ವಳಕ್ಕುಂಜ, ಪ್ರತಿಭಾಶಾಲಿ ಪುಂಡುವೇಷಧಾರಿ ವೆಂಕಟೇಶ ಕಲ್ಲುಗುಂಡಿ ಮತ್ತು ನಿಷ್ಠಾವಂತ ನೇಪಥ್ಯ ಕಲಾವಿದರಾದ ಕುಪ್ಪೆಪದವು ಸುರೇಶ ಅವರನ್ನು ಸಂಮಾನಿಸಿ ‘ಪವಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ರವಿಶಂಕರ ವಳಕ್ಕುಂಜ ಸಂಮಾನಿತರ ಪರವಾಗಿ ಸಂಘಟಕರಿಗೆ ಕೃತಜ್ಞತೆಯ ನುಡಿಗಳನ್ನಾಡಿದರು. ಡಾ. ಶ್ರುತಕೀರ್ತಿ ರಾಜ್ ಕಲಾವಿದರ ಅಭಿನಂದನ ನುಡಿಗಳನ್ನಾಡಿದರು. ಮನೆಯ ಇಂಜಿನೀಯರ್ ಪಿ. ದಿನೇಶ್ ಪೂಜಾರಿಯವರನ್ನು ಅಭಿನಂದಿಸಲಾಯಿತು. ಯಕ್ಷಗಾನ ಕಲಾರಂಗದ ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ್, ಅಜಿತ್ ಕುಮಾರ್, ಅನಂತರಾಜ ಉಪಾಧ್ಯ, ಗಣೇಶ್ ಬ್ರಹ್ಮಾವರ, ಆನಂದ ಶೆಟ್ಟಿ ಇವರ ಸಮಕ್ಷದಲ್ಲಿ ಮುರಲಿ ಕಡೆಕಾರ್ ಅವರು ಪರಶುರಾಮ ಶೆಟ್ಟಿ ಮತ್ತು ವಿಜಯಾ ಪಿ. ಶೆಟ್ಟಿ ದಂಪತಿಯನ್ನು ಸ್ಮರಣಿಕೆ ನೀಡಿ ಗೌರವಿಸಿದರು.

Leave a Reply

Your email address will not be published. Required fields are marked *

error: Content is protected !!