ಶ್ರೀಕೃಷ್ಣ ಮಠ, ಮಸೀದಿ, ಚರ್ಚ್‌ಗೆ ಭೇಟಿ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಉಡುಪಿ, ಫೆ.6: ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಇಂದು ಉಡುಪಿ ಶ್ರೀಕೃಷ್ಣ ಮಠ, ಜಾಮೀಯ ಮಸೀದಿ ಹಾಗೂ ಶೋಕ ಮಾತಾ ಚರ್ಚ್‌ಗೆ ಭೇಟಿ ನೀಡಿದರು.

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಸಚಿವರು, ಶ್ರೀಕೃಷ್ಣ ದೇವರ ದರ್ಶನ ಪಡೆದು, ನಂತರ ಗೀತಾಮಂದಿರದಲ್ಲಿ ಪರ್ಯಾಯ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸ್ವಾಮೀಜಿ ಪರ್ಯಾಯ ಯೋಜನೆ ಬಗ್ಗೆ ತಿಳಿಸಿ, ಸಚಿವರಿಗೆ ಭಗವದ್ಗೀತೆ ಪುಸ್ತಕವನ್ನು ನೀಡಿ ಹರಸಿದರು.

ಬಳಿಕ ಸಚಿವರು ಉಡುಪಿ ಜಾಮೀಯ ಮಸೀದಿಗೆ ಭೇಟಿ ನೀಡಿದರು. ಈ ಸಂದರ್ಭ ಮಸೀದಿಯ ಖತೀಬ್ ಮೌಲಾನ ಅಬ್ದುರ್ರಶೀದ್ ನದ್ವಿ ದುವಾ ನೆರವೇರಿಸಿದರು. ಮಸೀದಿ ಅಧ್ಯಕ್ಷ ರಿಯಾಝ್ ಅಹ್ಮದ್ ಇದ್ದರು.

ಉಡುಪಿ ಬಿಷಪ್ ಹೌಸ್ ಮತ್ತು ಶೋಕ ಮಾತಾ ದೇವಾಲಯಕ್ಕೆ ಸಚಿವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಉಡುಪಿ ಧರ್ಮಾಧ್ಯಕ್ಷರ ಅನುಪಸ್ಥಿತಿಯಲ್ಲಿ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸಚಿವರನ್ನು ಧರ್ಮಪ್ರಾಂತ್ಯದ ಪರವಾಗಿ ಗೌರವಿಸಿದರು.

ಈ ವೇಳೆ ಸಚಿವರು ಧರ್ಮಪ್ರಾಂತ್ಯ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡರಲ್ಲದೆ ಹಾಗೂ ಕ್ರೈಸ್ತ ಸಮುದಾಯದ ಅಭಿವೃಧ್ದಿಗೆ ಸರಕಾರದ ಯೋಜನೆಗಳನ್ನು ಉಪಯೋಗಿಸಿಕೊಳ್ಳುವಂತೆ ಸೂಚಿಸಿದರು.

ಈ ವೇಳೆ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಮಣಿಪಾಲ ಕ್ರೈಸ್ಟ್ ಚರ್ಚಿನ ಧರ್ಮಗುರು ವಂ.ರೋಮಿಯೊ ಲೂವಿಸ್, ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ನಿರ್ದೇಶಕ ವಂ.ಆಲ್ಬನ್ ಡಿಸೋಜಾ, ತರಬೇತಿ ನಿರತ ಗುರು ವಂ ಸ್ಟೀಫನ್ ಉಪಸ್ಥಿತರಿದ್ದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮುಖಂಡರಾದ ಎಂ.ಎ.ಗಫೂರ್, ಹಬೀಬ್ ಅಲಿ, ಅಶೋಕ್ ಕುಮಾರ್ ಕೊಡವೂರು, ಕಿಶನ್ ಹೆಗ್ಡೆ ಕೊಳ್ಕೆಬೈಲು ಮೊದಲಾದವರು ಸಚಿವರೊಂದಿಗೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!