ಬ್ರಹ್ಮಾವರ: ಹಿರಿಯ ಔಷಧಿ ತಜ್ಞರಿಗೆ ಸನ್ಮಾನ

ಉಡುಪಿ, ಫೆ.4: ಬ್ರಹ್ಮಾವರದ ಸುವರ್ಣ ಎಂಟರ್‌ಪ್ರೈಸಸ್ ವತಿಯಿಂದ ಇದೇ ಮೊದಲ ಬಾರಿಗೆ ಜಿಲ್ಲೆಯ ಹಿರಿಯ ಔಷಧ ತಜ್ಞರನ್ನು ಇತ್ತೀಚೆಗೆ ನಗರದ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ಸತ್ಕರಿಸಿ ಸನ್ಮಾನಿಸಲಾಯಿತು.

ಉಡುಪಿ ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕ ಶಂಕರನಾಯ್ಕ್ ಅವರು ಜಿಲ್ಲೆಯ ಸುಮಾರು 30 ಮಂದಿ ಹಿರಿಯ ಔಷಧ ತಜ್ಞರನ್ನು ಗೌರವಿಸಿದರು. ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಇವರ ಕೊಡುಗೆ ಅಪಾರ ಹಾಗೂ ಇದೊಂದು ಶ್ಲಾಘನೀಯ ಕಾರ್ಯ ಎಂದವರು ಬಣ್ಣಿಸಿದರು.

ಉಡುಪಿ ಜಿಲ್ಲಾ ಕೆಮಿಸ್ಟ್ ಹಾಗೂ ಡ್ರಗಿಸ್ಟ್ ಸಂಘದ ಅಧ್ಯಕ್ಷ ಅಮ್ಮುಂಜೆ ರಮೇಶ್ ನಾಯಕ್ ಅವರು ಮಾತನಾಡಿ ಔಷಧ ತಜ್ಞರು ಜಿಲ್ಲೆಯ ಮೂಲೆ ಮೂಲೆಗಳಲ್ಲಿ ರೋಗಿಗಳಿಗೆ ಸಮರ್ಪಕವಾದ ಔಷಧಿಗಳನ್ನು ಕ್ಲಪ್ತ ಸಮಯದಲ್ಲಿ ದೊರಕಿಸಿಕೊಡುವ ಜವಾಬ್ದಾರಿ ಹೊಂದಿದ್ದು, ದೇಶ ಕಾಯುವ ಸೈನಿಕರಂತೆ ಎಂದರು.

ಕೊಡಗು ಸರಕಾರಿ ವೈದ್ಯಕೀಯ ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ 40ವರ್ಷಕ್ಕೂ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ ಔಷಧಿ ಅಂಗಡಿಗಳ ಮಾಲಕರನ್ನು ಸನ್ಮಾನಿಸಲಾಯಿತು.

ಬ್ರಹ್ಮಾವರ ಸುವರ್ಣ ಎಂಟರ್‌ಪ್ರೈಸಸ್‌ನ ಮಧುಸೂದನ ಹೇರೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುನೀತಾ ಮಧುಸೂದನ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!