ಹಿರಿಯ ಬಿಜೆಪಿ ಮುಖಂಡ, ಆರ್.ಎಸ್.ಎಸ್. ಧುರೀಣ ಸೋಮಶೇಖರ್ ಭಟ್ ನಿಧನ
ಉಡುಪಿ: ಆರ್.ಎಸ್.ಎಸ್. ಧುರೀಣ, ಬಿಜೆಪಿ ಹಿರಿಯ ಮುಖಂಡ ಸೋಮಶೇಖರ್ ಭಟ್ (89) ಭಾನುವಾರ ನಿಧನರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಇವರು, ಎಲ್.ಕೆ.ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಅವರ ನಿಕಟವರ್ತಿಯಾಗಿದ್ದರು. ಮಾಜಿ ಸಚಿವ ದಿವಂಗತ ವಿ.ಎಸ್.ಆಚಾರ್ಯರಿಗೆ ಮಾರ್ಗದರ್ಶಕರಾಗಿದ್ದರು. 2023 ರಲ್ಲಿ ಎಮ್.ಜಿ.ಎಮ್ ಮೈದಾನದಲ್ಲಿ ನಡೆದ ಅಟಲ್ ಉತ್ಸವದಲ್ಲಿ ಭಾಗಿಯಾಗಿದ್ದು, ಇವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿದೆ.
ಉಡುಪಿ ಪುರಸಭೆಯ ಅಧ್ಯಕ್ಷರಾಗಿ, ಕೊಡಗು ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಬಿಜೆಪಿಯನ್ನು ತಳಮಟ್ಟದಲ್ಲಿ ಕಟ್ಟಿ ಬೆಳೆಸಿದ್ದರು. 1968 ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದು ಪರಿಷತ್ ನ ಸಮಾವೇಶದ ಕಾರ್ಯದರ್ಶಿಯಾಗಿ ಸಮಾವೇಶ ಯಶಸ್ವಿಯಾಗಲು ಶ್ರಮಿಸಿದ್ದರು. ಸಮಾವೇಶಕ್ಕೆ ಆಗಮಿಸಿದ ಕಾರ್ಯಕರ್ತರು ತಂಗಲು ಉಡುಪಿಯ ಪ್ರತಿಯೊಬ್ಬ ನಾಗರಿಕನ ಮನೆಯಲ್ಲಿ ವ್ಯವಸ್ಥೆ ಮಾಡುವಲ್ಲಿ, ಸೋಮಶೇಖರ್ ಭಟ್ಟರ ಪಾತ್ರ ಮಹತ್ವದ್ದಾಗಿದೆ.
ಕರೋನಾ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸೋಮಶೇಖರ್ ಭಟ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ, ಆರೋಗ್ಯವನ್ನು ವಿಚಾರಿಸಿದ್ದು ಗಮನಾರ್ಹ.
ನನ್ನ ಮಾರ್ಗದರ್ಶಕರೂ, ರಾಜಕೀಯ ಗುರುಗಳಾದ ಎಂ. ಸೋಮ ಶೇಖರ್ ಭಟ್ ರವರು ದೈವಾಧೀನರಾಗಿರುವ ಸುದ್ದಿ ತೀವ್ರ ದುಃಖ ತಂದಿದೆ. ರಾಷ್ಟ್ರೀಯವಾದಿ ಚಿಂತನೆಯನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು, ಸಾವಿರಾರು ಕಾರ್ಯಕರ್ತರಿಗೆ ಆದರ್ಶಪ್ರಾಯರಾಗಿದ್ದ “ಸೋಮಣ್ಣ” ನವರ ವ್ಯಕ್ತಿತ್ವ ನಮಗೆಲ್ಲ ಸದಾ ಪ್ರೇರಣೆಯಾಗಲಿದೆ. ಅಗಲಿದ ಹಿರಿಯ ಚೇತನಕ್ಕೆ ಪರಮಾತ್ಮ ಚಿರಶಾಂತಿ ಕರುಣಿಸಲಿ. ಕುಟುಂಬದ ಬಂಧುಗಳಿಗೆ, ಅವರ ಅಭಿಮಾನಿಗಳಿಗೆ ಅವರ ಅಗಲುವಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ…
ಯಶ್ಪಾಲ್ ಸುವರ್ಣ
ಶಾಸಕ, ಉಡುಪಿ
ಗಣ್ಯರ ಕಂಬನಿ…
ಆರ್.ಎಸ್.ಎಸ್. ಮುಖಂಡ ಶಂಭು ಶೆಟ್ಟಿ, ಮುಂಬಯಿ ಆರ್.ಎಸ್.ಎಸ್. ಮುಖಂಡ ಬಾಲಕೃಷ್ಣ ಭಂಡಾರಿ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ಶಾಸಕರಾದ ಗುರುರಾಜ್ ಗಂಟಿಹೊಳೆ, ಸುನೀಲ್ ಕುಮಾರ್, ಕಿರಣ್ ಕೊಡ್ಗಿ, ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ, ಮಾಜಿ ಜಿಲ್ಲಾಧ್ಯಕ್ಷರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಮಟ್ಟಾರ್ ರತ್ನಾಕರ್ ಹೆಗ್ಡೆ, ಕುಯಿಲಾಡಿ ಸುರೇಶ್ ನಾಯಕ್, ದ.ಕ ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಮುಖಂಡರಾದ ಪ್ರಮೋದ್ ಮಧ್ವರಾಜ್, ಶ್ರೀನಿಧಿ ಹೆಗ್ಡೆ, ಶ್ರೀಶ ನಾಯಕ್ ಪೆರ್ಣಂಕಿಲ, ಗೀತಾಂಜಲಿ ಸುವರ್ಣ, ನಯಾನ ಗಣೇಶ್, ರಾಜ್ಯ ಮಹಿಳಾ ಮೋರ್ಚಾ ಪ್ರ.ಕಾರ್ಯದರ್ಶಿ ಶಿಲ್ಪಾ ಸುವರ್ಣ, ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ದಿನಕರ್ ಶೆಟ್ಟಿ ಹೆರ್ಗ, ರಾಘವೇಂದ್ರ ಕಿಣಿ, ರೇಷ್ಮಾ ಉದಯ್ ಶೆಟ್ಟಿ, ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್ ಸಂತಾಪ ಸೂಚಿಸಿದ್ದಾರೆ.
ಪೇಜಾವರ ಶ್ರೀ ಸಂತಾಪ
ಉಡುಪಿ ಅಷ್ಟಮಠಗಳೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದರು. ಅವರ ನಿಧನಕ್ಕೆ ಪೇಜಾವರ ಶ್ರೀಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದು , ಅವರ ರಾಷ್ಟ್ರ ನಿಷ್ಠೆ ಮತ್ತು ರಾಮ ನಿಷ್ಠೆ ಅನುಪಮವಾದುದು . ರಾಜಕಾರಣದಲ್ಲಿ ನಿಷ್ಠೆ ಪ್ರಾಮಾಣಿಕತೆಯ ಮೌಲ್ಯವನ್ನು ಪ್ರತಿನಿಧಿಸಿದವರು , ಹಾಗೂ ಸಂಘದ ತತ್ವಗಳಿಗೆ ತಮ್ಮನ್ನು ಅರ್ಪಿಸಿಕೊಂಡವರು . ಅವರ ಆತ್ಮಕ್ಕೆ ಸದ್ಗತಿಯನ್ನು ಅಯೋಧ್ಯೆ ರಾಮನಲ್ಲಿ ಪ್ರಾರ್ಥಿಸುವುದಾಗಿ ಸಂದೇಶದಲ್ಲಿ ತಿಳಿಸಿದ್ದಾರೆ .
ಬಿಜೆಪಿ ಹಿರಿಯ ಮುಖಂಡ, ಆರ್. ಎಸ್.ಎಸ್ ಧುರೀಣ ಸೋಮಶೇಖರ ಭಟ್ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಧುರೀಣ, ಬಿಜೆಪಿ ಹಿರಿಯ ಮುಖಂಡ, ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಸೋಮಶೇಖರ ಭಟ್ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿಯವರ ನಿಕಟವರ್ತಿ ಹಾಗೂ ಮಾಜಿ ಸಚಿವ ದಿ. ಡಾ. ವಿ.ಎಸ್. ಆಚಾರ್ಯ ಅವರ ಮಾರ್ಗದರ್ಶಕರಾಗಿದ್ದ ಸೋಮಶೇಖರ ಭಟ್ ಅವರು ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆ ವಾಸ, ಅಯೋಧ್ಯೆ ಶ್ರೀ ರಾಮ ಮಂದಿರದ ಕರೆಸೇವಕರಾಗಿ ಮುಂಚೂಣಿಯಲ್ಲಿ ಸೇವೆ, ಉಡುಪಿಯಲ್ಲಿ ನಡೆದ ಸಂತ ಸಮ್ಮೇಳನದ ನೇತೃತ್ವ ಮುಂತಾದ ಐತಿಹಾಸಿಕ ಸಾಧನೆಗಳ ಸರದಾರ, ಸಾವಿರಾರು ಕಾರ್ಯಕರ್ತರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ ಸೋಮಶೇಖರ್ ಭಟ್ ಅವರ ಅಗಲುವಿಕೆ ಭಾರತೀಯ ಜನತಾ ಪಾರ್ಟಿಗೆ ತುಂಬಲಾರದ ನಷ್ಟವೆನಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ಪಕ್ಷದ ನಾಳೆಯ ಎಲ್ಲಾ ಕಾರ್ಯಕ್ರಮಗಳು ರದ್ದು:
ನಾಳೆ ನಿಗದಿಯಾಗಿರುವ ಪಕ್ಷದ ಎಲ್ಲಾ ಚಟುವಟಿಕೆಗಳನ್ನು ಹಿರಿಯ ಚೇತನ ಸೋಮಶೇಖರ್ ಭಟ್ ಅವರ ಗೌರವಾರ್ಥ ರದ್ದುಪಡಿಸಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.