ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿ ಸಂತೋಷ್‌ ರಾವ್‌ಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಬೆಂಗಳೂರು: ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂತೋಷ್‌ ರಾವ್‌ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ವಿಶೇಷ (ಮಕ್ಕಳ) ನ್ಯಾಯಾಲಯವು ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ್ದನ್ನು ಬದಿಗೆ ಸರಿಸುವಂತೆ ಕೋರಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಂತೋಷ್‌ ರಾವ್‌ಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿ ಸಂತೋಷ್‌ ರಾವ್‌ ಅವರನ್ನು 2023ರ ಜೂನ್‌ 16ರಂದು ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಘಟನೆ ನಡೆದಿತ್ತು. ಪ್ರಕರಣವನ್ನು ಮೊದಲಿಗೆ ಬೆಳ್ತಂಗಡಿ ಠಾಣಾ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. 2013ರ ನವೆಂಬರ್‌ 6ರಂದು ಸರ್ಕಾರವು ಸಿಬಿಐಗೆ ತನಿಖೆಗೆ ಆದೇಶಿಸಿತ್ತು. ತನಿಖಾಧಿಕಾರಿಗಳು ಕಾರ್ಕಳ ಮೂಲದ ಸಂತೋಷ್ ರಾವ್ ಎಂಬಾತನನ್ನು ಆರೋಪಿಯಾಗಿ ಗುರುತಿಸಿದ್ದರು.

ಆದರೆ, ಪ್ರಕರಣದ ವಿಚಾರಣೆಯ ನಂತರ ಸಿಬಿಐ ವಿಶೇಷ ನ್ಯಾಯಾಲಯವು 2023ರ ಜುಲೈ 16ರಂದು ಆರೋಪಿಯನ್ನು ಖುಲಾಸೆಗೊಳಿಸಿತ್ತು. ಇದರಿಂದ ವಿವಿಧ ಸಂಘಟನೆಗಳು ರಾಜಕೀಯ ಪಕ್ಷಗಳು ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. ಹೀಗಾಗಿ, ಮರು ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಪೀಠವು ಪ್ರಕರಣದಲ್ಲಿ ಸರ್ಕಾರ, ಮೂಲ ದೂರುದಾರರು ಅಥವಾ ಸಂತ್ರಸ್ತ ಕುಟುಂಬವು ಆರೋಪಿಯನ್ನು ದೋಷಮುಕ್ತ ಗೊಳಿಸಿದ ವಿಚಾರಣಾಧೀನ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!