ಅರ್ಚಕರ ಸಂಬಳ ವಾಪಾಸ್- ಶಾಸಕ ಗಂಟಿಹೊಳೆ ಆಕ್ರೋಶ
ಬೈಂದೂರು: ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳ ಅರ್ಚಕರ ಸಂಬಳವನ್ನು ಸರ್ಕಾರಕ್ಕೆ ಹಿಂತಿರುಗಿಸುವಂತೆ ಅರ್ಚಕರಿಗೆ ಕಾಂಗ್ರೆಸ್ ಸರ್ಕಾರ ನೋಟಿಸ್ ನೀಡುತ್ತಿರುವುದು ದುರಹಂಕಾರದ ನಡೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯ ಮುಂದುವರೆದ ಭಾಗವಾಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಡಿಮೆ ಆದಾಯದ ನೆಪವೊಡ್ಡಿ ಅರ್ಚಕರು ಪಡೆಯುತ್ತಿದ್ದ ಸಂಬಳವನ್ನು ಸರ್ಕಾರಕ್ಕೆ ಹಿಂದಿರುಗಿಸು ವಂತೆ ನೋಟಿಸ್ ನೀಡಲಾಗುತ್ತಿದೆ. ಚಿಕ್ಕಮಗಳೂರಿನ ಕೋದಂಡರಾಮ ದೇವಸ್ಥಾನದ ಅರ್ಚಕರಾದ ಹಿರೇಮಗಳೂರು ಕಣ್ಣನ್ ಅವರಿಗೆ ಹಿಂದಿನ 10 ವರ್ಷಗಳ ಅವಧಿಯಲ್ಲಿ ಪಡೆದ ವೇತನದಲ್ಲಿ ತಿಂಗಳಿಗೆ 4500 ರಂತೆ ಹಿಂತಿರುಗಿಸಲು ಸೂಚನೆ ನೀಡಲಾಗಿದೆ. ಹಿಂತಿರುಗಿಸಬೇಕಾದ ಒಟ್ಟು ಮೊತ್ತ 4 ಲಕ್ಷವನ್ನೂ ಮೀರುತ್ತದೆ. ಇಷ್ಟೊಂದು ಹಣವನ್ನು ಅರ್ಚಕರು ಹೇಗೆ ಮತ್ತು ಏಕೆ ಹಿಂತಿರುಗಿಸಬೇಕು? ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಆದಾಯ ಕಡಿಮೆ ಇದ್ದಲ್ಲಿ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೇ ಹೊರತು ಅರ್ಚಕರಿಗೆ ನೀಡಲಾಗುತ್ತಿದ್ದ ವೇತನವನ್ನು ವಾಪಾಸ್ ಕೇಳುವುದು ಮೂರ್ಖತನದ ನಿರ್ಧಾರವಾಗಿದೆ. ಸರ್ಕಾರ ಕೂಡಲೇ ಈ ಆದೇಶವನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೇನೆ ಮತ್ತು ರಾಜ್ಯದ ಜನತೆಯಲ್ಲಿ ಸರ್ಕಾರ ಕ್ಷಮೆಯಾಚಿಸಬೇಕು ಎಂದು ಸರ್ಕಾರದ ವಿರುದ್ಧ ಪ್ರಹಾರ ನಡೆಸಿದ್ದಾರೆ.
94C ಸಮಸ್ಯೆ ಇತ್ಯರ್ಥಕ್ಕಾಗಿ ಜನಸಂಪರ್ಕ ಸಭೆ ನಡೆಸುವಂತೆ ಅಧಿಕಾರಿಗಳಿಗೆ ಶಾಸಕ ಗಂಟಿಹೊಳೆ ಸೂಚನೆ
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಇಂದು ಕುಂದಾಪುರ ತಾಲೂಕು ಕಚೇರಿಯಲ್ಲಿ ಬೈಂದೂರು ಕ್ಷೇತ್ರದ 94C, ಗೋಮಾಳ, ಕುಡಿಯುವ ನೀರು ಮತ್ತು ಬರ ನಿರ್ವಹಣೆ ಸಮಸ್ಯೆಗಳ ಕುರಿತು ಕಂದಾಯ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಗೋಮಾಳ ಜಾಗದ ಸರ್ವೆ ಆಗಿರುವ ಗ್ರಾಮವನ್ನು ಪಂಚಾಯತ್ ಪಿಡಿಒಗೆ ಹಸ್ತಾಂತರಿಸಿ, ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸುವಂತೆ ಮತ್ತು ಸತ್ತ ದನಗಳ ಕಳೇಬರ ವಿಲೇವಾರಿಗೆ ಜಾಗದ ಕೊರತೆಯಿದ್ದು, ಆದಷ್ಟು ಬೇಗ ಸರ್ವೆ ಮಾಡಿ ಜಾಗವನ್ನು ಪಿಡಿಒಗಳಿಗೆ ಹಸ್ತಾಂತರಿಸಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.