ಮಂಗಳೂರು: ಕೊಂಕಣಿ ಲೇಖಕ್ ಸಂಘ ಸಾಹಿತ್ಯ ಪ್ರಶಸ್ತಿಗೆ ಡಾ.ಜೆರಾಲ್ಡ್ ಪಿಂಟೊ ಆಯ್ಕೆ

ಮಂಗಳೂರು, ಫೆ 02ಕೊಂಕಣಿ ಲೇಖಕ್ ಸಂಘ್ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿ ಆರಂಭಗೊಂಡಿದ್ದು, 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ್ ಸಂಘ್ ನಿರ್ಧರಿಸಿದೆ. 2024 ನೇ ಸಾಲಿನ ಕೊಂಕಣಿ ಲೇಖಕ್ ಸಂಘ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಸಾಹಿತಿ ಡಾ| ಜೆರಾಲ್ಡ್ ಪಿಂಟೊ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಚಾಲಕ ರಿಚರ್ಡ್ ಮೊರಾಸ್ ಹೇಳಿದ್ದಾರೆ.

ಶುಕ್ರವಾರ ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಶಸ್ತಿಯು ರು. 25,000 ರೂ. ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಫೆ.17ಶನಿವಾರ ಸಂಜೆ 6.30ಕ್ಕೆ, ಸಂದೇಶ ಪ್ರತಿಷ್ಠಾನ, ಬಜ್ಜೋಡಿ, ಮಂಗಳೂರು ಇಲ್ಲಿ ಜರಗಲಿರುವುದು ಎಂದು ತಿಳಿಸಿದ್ದಾರೆ. ಜೆಪಿಂಟೊ ಅವರ 6 ಕಾದಂಬರಿಗಳು, 75 ಕತೆಗಳು ಹಾಗೂ 900ಕ್ಕೂ ಮೇಲ್ಪಟ್ಟು ಲೇಖನಗಳು ಕೊಂಕಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

‘ಕುಡ್ಮಿ ಕೊಂಕ್ಣಿ ಲೋಕ್‌ವೇದ್’ ಎಂಬ ಸಂಶೋಧನಾ ಗೃಂಥ ಹಾಗೂ ‘ವಿಸಾವ್ಯಾ ಶೆಕ್ಡ್ಯಾಚೆ ಕೊಂಕ್ಣಿ ಮ್ಹಾನ್ ಮನಿಸ್’ ಎಂಬ ಕೃತಿಯನ್ನು ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಕಟಿಸಿದ್ದಾರೆ. ಅವರು ಬರೆದ ಇನ್ನಿತರ ಪುಸ್ತಕಗಳಲ್ಲಿ ತುಜೆಂ ಶಿಕಾಪ್, ತುಜಿ ವೃತ್ತಿ, ಗ್ಯಾಲಕ್ಸಿ, ವಿಶ್ವ್ ವಿಜ್ಞಾನ್ ಪ್ರಮುಖವಾಗಿವೆ. ಅವರಿಗೆ ಕೊಂಕ್ಣಿ ಕುಟಮ್ ಬಾಹ್ರೇಯ್ನ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ದಾಯ್ಜಿ ದುಬಾಯ್, ದಿವೊ ಸಾಹಿತ್ಯ ಪ್ರಶಸ್ತಿ ಲಭಿಸಿವೆ.ಇನ್ನು ‘ರಾಕ್ಣೊ’ ಸಂಪಾದಕೀಯ ಮಂಡಳಿಯ ಸದಸ್ಯರಾಗಿ, ‘ಆಮ್ಚೊ ಸಂದೇಶ್’ ಪತ್ರಿಕೆಯ ಸಂಪಾದಕರಾಗಿ, ‘ಮಿಲಾರ್‌ಚಿಂ ಲ್ಹಾರಾಂ’ ತ್ರೈಮಾಸಿಕದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

ಕಥೊಲಿಕ್ ಸಭಾದ ಕೇಂದ್ರೀಯ ಅಧ್ಯಕ್ಷರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದ ಅವರು ಉಡುಪಿಯಲ್ಲಿ ‘ಕೊಂಕ್ಣಿ ಭಾಸ್, ಸಾಹಿತ್ಯ್ ಕಲಾ ಅನಿ ಸಾಂಸ್ಕೃತಿಕ್ ಸಂಘಟನ್’ ಎಂಬ ಸಂಘಟನೆಯನ್ನು ಸ್ಥಾಪಿಸಿ ಅನೇಕ ಕೊಂಕಣಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಎಂ.ಸಿ.ಸಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಸಮಿತಿ ಸದಸ್ಯರಾದ ಡೊಲ್ಫಿ ಎಫ್. ಲೋಬೊ, ಹೆನ್ರಿ ಮಸ್ಕರೇನ್ಹಸ್, ಜೆ. ಎಫ್. ಡಿಸೋಜಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!