ಬಾಲಿವುಡ್ ನಟಿ ಪೂನಂ ಪಾಂಡೆ ನಿಧನ
ಮುಂಬೈ: ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಸಾವನ್ನಪ್ಪಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.
ಗರ್ಭಕೋಶದ ಕ್ಯಾನ್ಸರ್‌ನಿಂದ ಸಾವನನ್ನಪ್ಪಿದ್ದಾರೆ ಎಂದು ಅವರ ಮ್ಯಾನೇಜರ್ ಖಚಿತಪಡಿಸಿದ್ದಾರೆ. ಪೂನಮ್ ಪಾಂಡೆ ಅವರ ಮ್ಯಾನೇಜರ್ ಹಾಗೂ ಅವರ ಟೀಮ್ ಈ ಕುರಿತಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡಿದ್ದಾರೆ.
ಇಂದಿನ ಬೆಳಗ್ಗೆ ನಮಗೆಲ್ಲರಿಗೂ ಕಠಿಣ ದಿನವಾಗಿತ್ತು. ಗರ್ಭಕಂಠದ ಕ್ಯಾನ್ಸರ್‌ನ ಕಾರಣದಿಂದಾಗಿ ಇಂದು ನಾವು ಪೂನಮ್ ಅವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ದುಃಖವಾಗುತ್ತಿದೆ. ಈ ದುಃಖದ ಸಮಯದಲ್ಲಿ ನಾವು ನಮ್ಮ ಖಾಸಗಿತನಕ್ಕಾಗಿ ವಿನಂತಿ ಮಾಡುತ್ತಿದ್ದೇವೆ. ಆಕೆಯೊಂದಿಗೆ ಹಂಚಿಕೊಂಡ ಎಲ್ಲಾ ಕ್ಷಣಗಳನ್ನು ನಾವು ನೆನಪಿಸಿಕೊಳ್ಳುತ್ತಿದ್ದೇವೆ’ ಎಂದು ಬರೆದುಕೊಂಡಿದೆ.
ಪೂನಮ್ ಪಾಂಡೆ ಅವರು ಉತ್ತರಪ್ರದೇಶದ ಕಾನ್ಪುರದ ಮನೆಯಲ್ಲಿ ನಿಧನರಾಗಿದ್ದಾರೆ. ತಮ್ಮ ವಿವಾದಿತ ಮಾತುಗಳಿಂದಲೇ ಪ್ರಖ್ಯಾತಿ ಪಡೆದಿದ್ದ ಪೂನಮ್ ಪಾಂಡೆ, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಫಾಲೋವರ್‌ಗಳನ್ನು ಹೊಂದಿದ್ದರು.
ಪೂನಂ ಪಾಂಡೆ ಕನ್ನಡ ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ‘ಲವ್ ಈಸ್ ಪಾಯಿಸನ್’ ಎಂಬ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡಿದ್ದಾರೆ. ಇದರ ಜೊತೆಗೆ ಹಲವು ಬಾಲಿವುಡ್ ಸಿನಿಮಾಗಳಲ್ಲಿಯೂ ಪೂನಂ ನಟಿಸಿದ್ದಾರೆ.