ಅನುದಾನ ದುರ್ಬಳಕೆ: ಉಪ ನಿರ್ದೇಶಕ ಎನ್‌. ಎಚ್‌.ನಾಗೂರ ಸಹಿತ ಮೂವರು ಅಧಿಕಾರಿಗಳ ಅಮಾನತು

ವಿಜಯಪುರ: ದಶಕದ ಹಿಂದೆ ಶಿಕ್ಷಣ ಇಲಾಖೆಯಲ್ಲಿನ ಐಇಡಿಎಸ್‌ಎಸ್‌ ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗಳಿಗೆ ನಿಯಮ ಬಾಹಿರವಾಗಿ ಅನುದಾನ ಬಿಡುಗಡೆ ಮಾಡಿರುವ ಆರೋಪದಲ್ಲಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೇರಿ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಇಲಾಖೆ ಹಿರಿಯ ಅಧಿಕಾರಿಗಳ ಶಿಫಾರಸು ಆಧರಿಸಿ ಅಮಾನತು ಆದೇಶ ಹೊರಡಿಸಿದ್ದಾರೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವಿಜಯಪುರ ಜಿಲ್ಲೆಯ ಉಪ ನಿರ್ದೇಶಕರಾಗಿದ್ದ ಬಸವನಬಾಗೇವಾಡಿ ಹಿಂದಿನ ಬಿಇಒ ಆಗಿದ್ದ ಎನ್‌.ಎಚ್‌.ನಾಗೂರ, ಇಂಡಿ ಬಿಇಒ ಆಗಿದ್ದ ಹಾಲಿ ವಿಜಯಪುರ ಡೈಟ್‌ ಹಿರಿಯ ಉಪನ್ಯಾಸಕ ಎ.ಎಚ್‌. ಹತ್ತಳ್ಳಿ, ಸಿಂದಗಿ ಬಿಇಒ ಆಗಿದ್ದ ವಿಜಯಪುರ ಡೈಟ್‌ ಹಾಲಿ ಉಪನ್ಯಾಸಕ ಎಸ್‌.ಎ.ಮುಜಾವರ ಅಮಾನತಾಗಿರುವ ಅಧಿಕಾರಿಗಳು.2009-10, 2011-12ನೇ ಸಾಲಿನಲ್ಲಿ ಸರ್ಕಾರದ ಐಇಡಿಎಸ್‌ಎಸ್‌ ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಈ ಅಧಿಕಾರಿಗಳು ಅಸ್ತಿತ್ವದಲ್ಲೇ ಇಲ್ಲದ 18 ಸರ್ಕಾರೇತರ ಸಂಸ್ಥೆಗಳಿಗೆ ಶಿಫಾರಸು ಮಾಡಿರುವ ಹಾಗೂ ಅನುದಾನ ಬಿಡುಗಡೆ ಮಾಡಿ ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಅಮಾನತು ಮಾಡಲಾಗಿದೆ. ಅಧಿಕಾರಿಗಳು ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡ ಕುರಿತು 2019ರಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆಕ್ಷೇಪಿಸಿದೆ.

ಪ್ರಸ್ತುತ ಪ್ರಕರಣದಲ್ಲಿ ಬೆಳಗಾವಿ ಜಿಲ್ಲೆಯ ಅಧಿಕಾರಿಗಳು ಸೇರಿದ್ದು ಸೇವಾ ನಿವೃತ್ತಿ ಹೊಂದಿರುವ ಮೂವರು ಅಧಿಕಾರಿಗಳ ವಿರುದ್ಧ ಸಿವಿಲ್‌ ಮೊಕದ್ದಮೆ ಹೂಡಿ ಸರ್ಕಾರಕ್ಕೆ ವಂಚಿಸಿರುವ ಹಣದ ಮರು ಪಾವತಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!