ಕೆರಗೋಡು ಹನುಮ ಧ್ವಜ ವಿವಾದ: ಪಂಚಾಯತ್ ಪಿಡಿಓ ಅಮಾನತು

ಮಂಡ್ಯ: ಮಂಡ್ಯದ ಕೆರಗೋಡು ಗ್ರಾಮದ ಹನುಮ ಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯ್ತಿ ಪಿಡಿಓ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಕೆರಗೋಡು ಗ್ರಾಮದ ಹನುಮ ಧ್ವಜ ವಿವಾದ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಜಂಟಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಪ್ರತಿಭಟನೆ ವ್ಯಾಪಕವಾಗಿರುವಂತೆಯೇ ಇದೀಗ ಸರ್ಕಾರದ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕೆರಗೋಡು ಗ್ರಾಮ ಪಂಚಾಯಿತಿ ಪಿಡಿಓ ಜೀವನ್‌ ಬಿ.ಎಂ ಅವರನ್ನು ಅಮಾನತು ಮಾಡಿದೆ. 

ಮೂಲಗಳ ಪ್ರಕಾರ ಐದು ಕಾರಣಗಳನ್ನು ನೀಡಿ ಪಿಡಿಓ‌ ಅವರನ್ನು ಅಮಾನತು ಮಾಡಿ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ತನ್ವೀರ್ ಆಶೀಫ್ ಸೇಠ್ ಆದೇಶ ಹೊರಡಿಸಿದ್ದಾರೆ.

ಅಮಾನತು ಆದೇಶದಲ್ಲಿರುವಂತೆ ಗ್ರಾಮ ಪಂಚಾಯಿತಿ ಸ್ವತ್ತನ್ನು ಖಾಸಗಿಯವರಿಗೆ ನೀಡುವುದಕ್ಕೆ ಸರ್ಕಾರದ ಅನುಮತಿ ಕಡ್ಡಾಯ. ಆದರೆ, ಸದರಿ ನಿಯಮ ಉಲ್ಲಂಘಿಸಿ ಖಾಸಗಿಯವರಿಗೆ ನೀಡಿ ಕೆರಗೋಡು ಗ್ರಾಮದಲ್ಲಿ ನಡೆದ ಸಂಘರ್ಷಕ್ಕೆ ಪಿಡಿಓ ನೇರ ಕಾರಣ ಎಂದು ಆರೋಪಿಸಲಾಗಿದೆ.

ಅಲ್ಲದೆ ಧ್ವಜ ಸ್ತಂಭ ನಿರ್ಮಾಣಕ್ಕೆ ಅನುಮತಿ ನೀಡಿ ಕರ್ತವ್ಯ ಲೋಪ ಎಸಗಲಾಗಿದ್ದು, ಧ್ವಜ ಸ್ತಂಭದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲು ಅನುಮತಿ ನೀಡಿ, ಷರತ್ತು ಉಲ್ಲಂಘಿಸಿದ್ರು ಕ್ರಮಕೈಗೊಳ್ಳದೆ ನಿರ್ಲಕ್ಷಿಸಲಾಗಿದೆ. ರಾಷ್ಟ್ರ ಧ್ವಜದ ಬದಲು ಹನುಮ ಧ್ವಜ‌ ಹಾರಿಸಲು ಅವಕಾಶ ನೀಡಿರುವುದು ಮತ್ತು ಹನುಮ‌ ಧ್ವಜ‌ಹಾರಿಸಿದ್ದರು ಯಾವುದೇ ಕ್ರಮ ಕೈಗೊಳ್ಳದೇ ಕರ್ತವ್ಯ ಲೋಪ ಎಸಗಲಾಗಿದೆ ಎಂದು ಆರೋಪಿಸಿ ಅಮಾನತು ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!