ಉಡುಪಿ, ದ.ಕ. ಸಹಿತ ಐದು ಜಿಲ್ಲೆಗೆ ಇಂದು ಮತ್ತು ನಾಳೆ (ಅ.15ವರೆಗೆ) ರೆಡ್ ಅಲರ್ಟ್ ಘೋಷಣೆ

ಹೈದರಾಬಾದ್ ನ ಬಂದ್ಲಗುಡ ಪ್ರದೇಶದಲ್ಲಿ ರಕ್ಷಣಾ ಕಾರ್ಯ

ಉಡುಪಿ (ಉಡುಪಿ ಟೈಮ್ಸ್ ವರದಿ): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಕರಾವಳಿ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಬುಧವಾರ ಮತ್ತು ಗುರುವಾರ (ಅ.14 ಹಾಗೂ ಅ.15 ) ರೆಡ್ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ, ಬಾಗಲಕೋಟೆ, ಬೆಳಾಗಾವಿ ಜಿಲ್ಲೆಗಳಲ್ಲಿ ಅತೀಯಾದ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗಾಳಿಯು ಪಶ್ಚಿಮ ದಿಕ್ಕಿನ ಕಡೆಗೆ ಅಂದರೆ ಅಂಡಮಾನ್ ಭಾಗದಿಂದ ಉತ್ತರ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ಹೈದರಾಬಾದ್ ನಲ್ಲಿ ಎರಡು ದಿನಗಳಿಂದ ಸತತ ಮಳೆ: ಹಲವು ಪ್ರದೇಶಗಳು ಜಲಾವೃತ; 12 ಜನ ಸಾವು

ಹೈದರಾಬಾದ್ ನಗರದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಇದುವರೆಗೆ ಕನಿಷ್ಟ 12 ಮಂದಿ ಮೃತಪಟ್ಟಿದ್ದಾರೆ. ರಸ್ತೆಗಳಲ್ಲಿ ನೀರು ನುಗ್ಗಿ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದ್ದು ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ಭಾರೀ ಮಳೆಗೆ ಹೈದರಾಬಾದ್ ನ ಬಂದ್ಲಗುಡ ಪ್ರದೇಶದಲ್ಲಿ ಮಗು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ. ಸತತ ಮಳೆಗೆ ಬಂಡೆಯೊಂದು ನೀರಿನಲ್ಲಿ ಕೊಚ್ಚಿ ಬಂದು ಮನೆಗೆ ಬಿದ್ದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಹೈದರಾಬಾದ್ ನ ಶಂಶಾಬಾದ್ ಪ್ರದೇಶದ ಗಗನ್ ಪಹಾದ್ ಎಂಬಲ್ಲಿ  ಕಳೆದ ರಾತ್ರಿ ಸತತ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ಮೂವರು ಮೃತಪಟ್ಟಿದ್ದಾರೆ.

ಬಂಡ್ಲಗುಡದಲ್ಲಿ ಬಂಡೆ ಮನೆಯ ಮೇಲೆ ಬಿದ್ದು 8 ಮಂದಿ ಮೃತಪಟ್ಟಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ದಕ್ಷಿಣ ವಲಯ ಡಿಸಿಪಿ ಗಜರಾವ್ ಭೂಪಾಲ್ ತಿಳಿಸಿದ್ದಾರೆ.

ಈ ಮಧ್ಯೆ ಹೈದರಾಬಾದ್ ಸಂಸದ ಅಸದುದ್ದೀನ್ ಒವೈಸಿ ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮೊಹಮ್ಮಡಿಯಾ ಬೆಟ್ಟ, ಬಂಡ್ಲಗುಡದಲ್ಲಿ ಬಂಡೆ ಕುಸಿದು 9 ಮಂದಿ ಮೃತಪಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ ಮನೆಗಳೊಳಗೆ ನೀರು ನುಗ್ಗಿರುವುದರಿಂದ ಕೊಚ್ಚೆ ನೀರನ್ನು ಹೊರಹಾಕಲು ಹಿಮಯತ್ಸಾಗರ ಜಲಾಶಯದ ಎರಡು ಗೇಟ್ ಗಳನ್ನು ಬಿಡಲಾಗಿದ್ದು ಅಲ್ಲಿಂದ ಮುಸಿ ನದಿಗೆ 1,300 ಕ್ಯೂಸೆಕ್ಸ್ ನೀರು ಹೊರಹಾಕಲಾಗುತ್ತಿದೆ.

ನೀರಿನ ಒಳಹರಿವು ಹೆಚ್ಚಾಗುತ್ತಿದ್ದಂತೆ ಇಂದು ಜಲಾಶಯದ ಮತ್ತಷ್ಟು ಗೇಟ್ ಗಳನ್ನು ಬಿಡುವ ಸಾಧ್ಯತೆಯಿದೆ. 2010ರಲ್ಲಿ ಇಲ್ಲಿ ಪ್ರವಾಹ ಬಂದು ಇದೇ ರೀತಿ ಗೇಟ್ ಗಳನ್ನು ಬಿಡಲಾಗಿತ್ತು. ಹಿಮಯತ್ಸಾಗರದಲ್ಲಿ ಒಟ್ಟು 17 ಗೇಟ್ ಗಳಿವೆ.

ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ, ಇಂದು ಹೈದರಾಬಾದ್ ನಲ್ಲಿ ಮತ್ತಷ್ಟು ಮಳೆ ಸುರಿಯುವ ಸಾಧ್ಯತೆಯಿದೆ. ತೆಲಂಗಾಣದಾದ್ಯಂತ ನಿನ್ನೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು, ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

1 thought on “ಉಡುಪಿ, ದ.ಕ. ಸಹಿತ ಐದು ಜಿಲ್ಲೆಗೆ ಇಂದು ಮತ್ತು ನಾಳೆ (ಅ.15ವರೆಗೆ) ರೆಡ್ ಅಲರ್ಟ್ ಘೋಷಣೆ

  1. During this difficult time of Red alert in the Coastal districts and North karnataka, Bagalkote, Belgaum and other nebour Districts, government and all the departments should take immediate action for the safety of the people.

Leave a Reply

Your email address will not be published. Required fields are marked *

error: Content is protected !!