ಕ್ಷೇತ್ರ ಬದಲಾಯಿಸುವ ಪ್ರಶ್ನೆಯೇ ಇಲ್ಲ- ಸಚಿವೆ ಶೋಭಾ ಕರಂದ್ಲಾಜೆ
ತುಮಕೂರು ಜ.24: ಕ್ಷೇತ್ರ ಬದಲಾಯಿಸುವ ಪ್ರಶ್ನೆಯೇ ಇಲ್ಲ. ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು- ಉಡುಪಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ’ ಎಂದು ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಹಾಗೂ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.
ಈ ಬಗ್ಗೆ ಇಂದು ಮಾತನಾಡಿದ ಅವರು, ‘ಕಳೆದ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆ ಆಗಿದ್ದು, ಈ ಬಾರಿಯೂ ಅಲ್ಲಿಂದಲೇ ಸ್ಪರ್ಧಿಸುತ್ತೇನೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ಇಲ್ಲಿಗೆ ಬಂದು ಸ್ಪರ್ಧೆ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಮಾತು ಮುಂದುವರೆಸಿದ ಅವರು, ಅಭಿವೃದ್ಧಿ, ಅನುದಾನ ನೀಡುವ ವಿಚಾರದಲ್ಲಿ ಯಾವುದೇ ರಾಜ್ಯಕ್ಕೂ ತಾರತಮ್ಯ ಮಾಡುತ್ತಿಲ್ಲ. ಇದರಲ್ಲಿ ರಾಜಕೀಯ ಬೆರೆಸುತ್ತಿಲ್ಲ. ಎಲ್ಲಾ ರಾಜ್ಯಗಳು ಅಭಿವೃದ್ಧಿ ಹೊಂದಿದರೆ, ದೇಶ ಅಭಿವೃದ್ಧಿ ಕಾಣಲು ಸಾಧ್ಯವಿದೆ. ಹಾಗಾಗಿ ರಾಜ್ಯಕ್ಕೆ ಯಾವುದೇ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಬರ ಪರಿಹಾರದ ನೆರವು ಬೇಕಾದರೆ ರಾಜ್ಯ- ಕೇಂದ್ರ ಸರ್ಕಾರದ ಹೆಸರಿನಲ್ಲಿ ಜಂಟಿಯಾಗಿ ಬ್ಯಾಂಕ್‍ನಲ್ಲಿ ಖಾತೆ ತೆರೆಯಬೇಕು. ಖಾತೆ ತೆರೆದ ತಕ್ಷಣವೇ ಕೇಂದ್ರದಿಂದ ಹಣ ಬಿಡುಗಡೆ ಮಾಡಲಾಗುವುದು. ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಯಾಗುತ್ತಿರು ವ ಯಾವುದೇ ಯೋಜನೆಗಳಲ್ಲಿ ಅನುದಾನ ಸಿಗಬೇಕಾದರೆ ಇನ್ನು ಮುಂದೆ ಜಂಟಿ ಖಾತೆ ತೆರೆಯುವುದು ಕಡ್ಡಾಯ. ಈ ಬಗ್ಗೆ ನೀತಿ ಆಯೋಗ ಸ್ಪಷ್ಟವಾಗಿ ಸೂಚನೆ ನೀಡಿದೆ. ಕೇಂದ್ರ ಪುರಸ್ಕøತ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದರೂ ಸಾಕಷ್ಟು ಸಂದರ್ಭಗಳಲ್ಲಿ ರಾಜ್ಯ ಸರ್ಕಾರ ಹಣ ನೀಡುವುದಿಲ್ಲ. ಕೇಂದ್ರದ ಹಣ ವೆಚ್ಚವಾಗಿದ್ದರೂ ಹಣ ಕೊಡದೆ ರಾಜ್ಯ ಸತಾಯಿಸುತ್ತದೆ. ಇದರಿಂದ ಯೋಜನೆ ಜಾರಿ ಮಾಡುವುದು ಕಷ್ಟಕರವಾಗುತ್ತದೆ. ಹಾಗಾಗಿ ಜಂಟಿ ಖಾತೆ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು.