ಹಾಂಕಾಂಗ್ ಹಿಂದಿಕ್ಕಿ, ವಿಶ್ವದ 4ನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದ ಭಾರತ!

ನವದೆಹಲಿ: ಭಾರತೀಯ ಷೇರು ಮಾರುಕಟ್ಟೆ ಇದೇ ಮೊದಲ ಬಾರಿಗೆ ಹಾಂಕಾಂಗ್ ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಷೇರುಮಾರುಕಟ್ಟೆಯಾಗಿ ಹೊರಹೊಮ್ಮಿದೆ.  ಬ್ಲೂಮ್ ಬರ್ಗ್ ಮೀಡಿಯಾ ವರದಿ ಪ್ರಕಾರ, ಸೋಮವಾರ ಅಂತ್ಯದ ವೇಳೆಗೆ ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲಾದ ಷೇರುಗಳ ಒಟ್ಟು ಮೌಲ್ಯ 4.33 ಟ್ರಿಲಿಯನ್ ಡಾಲರ್ ಗೆ ತಲುಪಿದೆ. ಹಾಂಕಾಂಗ್ ನಲ್ಲಿ ಅದು 4.29 ಟ್ರಿಲಿಯನ್ ಡಾಲರ್ ಆಗಿತ್ತು.

ಪ್ರಸ್ತುತ, ಅಮೆರಿಕ 50.86 ಟ್ರಿಲಿಯನ್ ಡಾಲರ್ ನೊಂದಿಗೆ ವಿಶ್ವದ ಅತಿದೊಡ್ಡ ಷೇರು ಮಾರುಕಟ್ಟೆಯಾಗಿದೆ. ಚೀನಾ 8.44 ಟ್ರಿಲಿಯನ್ ಡಾಲರ್ ನೊಂದಿಗೆ  2ನೇ ಅತಿದೊಡ್ಡ ಷೇರು ಮಾಕಟ್ಟೆಯಾಗಿದ್ದರೆ 6.36 ಟ್ರಿಲಿಯನ್ ಡಾಲರ್ ನೊಂದಿಗೆ ಜಪಾನ್ ವಿಶ್ವದ ಮೂರನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿದೆ. 

ಬ್ಲೂಮ್‌ಬರ್ಗ್ ಪ್ರಕಾರ, ಭಾರತದ ಷೇರು ಮಾರುಕಟ್ಟೆ ಬಂಡವಾಳೀಕರಣವು ಡಿಸೆಂಬರ್ 5 ರಂದು ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ ದಾಟಿದೆ. ಇದರಲ್ಲಿಅರ್ಧದಷ್ಟು ಕಳೆದ ನಾಲ್ಕು ವರ್ಷಗಳಲ್ಲಿ ಬಂದಿದೆ. ಬೆಳೆಯುತ್ತಿರುವ ಚಿಲ್ಲರೆ ಹೂಡಿಕೆದಾರರ ನೆಲೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ (ಎಫ್‌ಐಐ) ನಿರಂತರ ಒಳಹರಿವು, ಬಲವಾದ ಸಾಂಸ್ಥಿಕ ಗಳಿಕೆಗಳು ಮತ್ತು ಘನ ದೇಶೀಯ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯ ಬೆಳವಣಿಗೆಯಾಗಿದೆ. ಭಾರತೀಯ ಮಾರುಕಟ್ಟೆಗಳು ಸತತ ಎಂಟು ವರ್ಷಗಳಿಂದ ಲಾಭದೊಂದಿಗೆ ನೆಲೆಸಿದ್ದು, ಮತ್ತಷ್ಟು ಬೆಳವಣಿಗೆಯಾಗುವ ಸಾಧ್ಯತೆ ದಟ್ಟವಾಗಿದೆ. 

ಮತ್ತೊಂದೆಡೆ, ಹಾಂಗ್ ಕಾಂಗ್‌ ನ ಹೆಂಗ್ ಸೆಂಗ್ ಷೇರು ಮಾರುಕಟ್ಟೆ ಸತತ ನಾಲ್ಕು ವರ್ಷ ಸರಣಿ ನಷ್ಟ ಕಂಡಿದೆ ಮತ್ತು ಶಾಂಘೈ ಸ್ಟಾಕ್ ಎಕ್ಸ್‌ಚೇಂಜ್  ಸತತ ಎರಡನೇ ವರ್ಷದ ನಷ್ಟವನ್ನು ಕಂಡಿದೆ. ಪ್ರಮುಖ ಆರ್ಥಿಕ ಪ್ರೋತ್ಸಾಹಕ ಕ್ರಮಗಳ ಕೊರತೆಯಿಂದಾಗಿ ಚೀನಾ ಮತ್ತು ಹಾಂಗ್ ಕಾಂಗ್ ಕಡೆಗಿನ ನಕಾರಾತ್ಮಕ ಭಾವನೆಯು ಈ ವರ್ಷ ಮತ್ತಷ್ಟು ಹೆಚ್ಚಾಗಿದೆ.

ಬ್ಲೂಮ್‌ಬರ್ಗ್ ಪ್ರಕಾರ, ಭಾರತ ಚೀನಾಕ್ಕೆ ಪರ್ಯಾಯವಾಗಿ ಸ್ಥಾನ ಪಡೆದಿದೆ. ಜಾಗತಿಕ ಹೂಡಿಕೆದಾರರು ಮತ್ತು ಕಂಪನಿಗಳಿಂದ ಬಂಡವಾಳವನ್ನು ಆಕರ್ಷಿಸುತ್ತಿದ್ದು, ವೇಗವಾಗಿ ಬೆಳೆಯುತ್ತಿರುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ.

Leave a Reply

Your email address will not be published. Required fields are marked *

error: Content is protected !!