ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸದಿರಲು ಕಾರಣ ತಿಳಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನವದೆಹಲಿ: ಬಿಜೆಪಿ ಮತ್ತು ಆರ್‌ಎಸ್ಎಸ್ ಅಯೋಧ್ಯೆಯ ರಾಮ ಮಂದಿರದ ಉದ್ಘಾಟನಾ ಸಮಾರಂಭವನ್ನು ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡಿದ್ದು, ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದು ತಮ್ಮ ಪಕ್ಷದ ನಾಯಕರಿಗೆ ಕಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರಿಗೆ ನೀಡಲಾಗಿದ್ದು, ಕಾರ್ಯಕ್ರಮಕ್ಕೆ ಹೋಗದಿರಲು ಪಕ್ಷ ತೀರ್ಮಾನ ಕೈಗೊಂಡಿರುವ ಕೆಲವು ದಿನಗಳ ನಂತರ ನಾಗಾಲ್ಯಾಂಡ್‌ನಲ್ಲಿ ಸಾಗುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

‘ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭವು ಪ್ರಧಾನಿ ಸುತ್ತ ಕೇಂದ್ರೀಕೃತವಾಗಿರುವ ರಾಜಕೀಯ ಕಾರ್ಯಕ್ರಮವಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಇದಕ್ಕೆ ಚುನಾವಣಾ ಪರಿಮಳವನ್ನು ನೀಡುತ್ತಿದೆ ಮತ್ತು ಅದಕ್ಕಾಗಿಯೇ ನಾವು ಭಾಗವಹಿಸಲು ಕಷ್ಟವಾಗುತ್ತಿದೆ’ ಎಂದು ಗಾಂಧಿ ಹೇಳಿದರು. ‘ನಮ್ಮ ಪ್ರಮುಖ ವಿರೋಧಿಗಳಾಗಿರುವ ಬಿಜೆಪಿ ಮತ್ತು ಆರ್‌ಎಸ್ಎಸ್ ಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಚುನಾವಣಾ ಕಾರ್ಯಕ್ರಮವಾಗಿ ಪರಿವರ್ತಿಸಿರುವಾಗ ರಾಮ ಮಂದಿರ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸುವುದು ನಮಗೆ ತುಂಬಾ ಕಷ್ಟಕರವಾಗಿದೆ’ ಎಂದು ಅವರು ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವು ಬಿಜೆಪಿಯನ್ನು ಸೋಲಿಸಲಿದೆ. ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಡುವೆ ಸೀಟು ಹಂಚಿಕೆ ಚರ್ಚೆಗಳನ್ನು ಸೌಹಾರ್ದಯುತವಾಗಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

‘ಇಂಡಿಯಾ ಮೈತ್ರಿಕೂಟದಲ್ಲಿರುವ ಸಣ್ಣ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ನಾವು ಒಟ್ಟಾಗಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ನನಗೆ ವಿಶ್ವಾಸವಿದೆ. ಸೀಟು ಹಂಚಿಕೆಯ ವಿಷಯವನ್ನು ಇಂಡಿಯಾ ಮೈತ್ರಿಯ ಮಿತ್ರಪಕ್ಷಗಳೊಂದಿಗೆ ಚರ್ಚಿಸಲಾಗುತ್ತಿದೆ. ಈ ಮಾತುಕತೆಗಳು ಸಾಕಷ್ಟು ಸಕಾರಾತ್ಮಕವಾಗಿ ನಡೆಯುತ್ತಿವೆ. ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳ ಮೈತ್ರಿಕೂಟ ಒಟ್ಟಾಗಿ ಗೆಲುವು ಸಾಧಿಸಲಿದೆ’ ಎಂದು ರಾಹುಲ್ ಗಾಂಧಿ ಹೇಳಿದರು.

ಜನವರಿ 14 ರಂದು ಮಣಿಪುರದ ತೌಬಲ್‌ನಿಂದ ಆರಂಭವಾದ ಯಾತ್ರೆ ಸೋಮವಾರ ಸಂಜೆ ನಾಗಾಲ್ಯಾಂಡ್ ತಲುಪಿತು. ಪಾದಯಾತ್ರೆಯು 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳ ಮೂಲಕ ಹಾದು ಹೋಗಲಿದ್ದು, 6,713 ಕಿ.ಮೀ.ಗಳನ್ನು ಕ್ರಮಿಸಲಿದೆ. ಈ ಯಾತ್ರೆಯು ಹೆಚ್ಚಾಗಿ ಬಸ್‌ಗಳ ಮೂಲಕ ಸಾಗಲಿದ್ದು, ಕಾಲ್ನಡಿಗೆಯಲ್ಲಿಯೂ ನಡೆಯಲಿದೆ. ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.

Leave a Reply

Your email address will not be published. Required fields are marked *

error: Content is protected !!