ಜ.22 ರಾಮ ಪ್ರಾಣ ಪ್ರತಿಷ್ಠಾಪನೆ: ಸರ್ಕಾರಿ ರಜೆ ಘೋಷಣೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ- ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಅಂದು ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜನವರಿ 22 ರಂದು ರಜೆ ನೀಡಬೇಕೆಂಬ ಬಿಜೆಪಿಯ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ , ಮನವಿ ಪತ್ರವನ್ನು ಇನ್ನೂ ನೋಡಿಲ್ಲ. ನೋಡುತ್ತೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ರಾಮ ಪ್ರಾಣ ಪ್ರತಿಷ್ಠಾಪನೆ ದಿನದಿಂದು ರಾಜ್ಯದಲ್ಲಿ ರಜೆ ನೀಡಬೇಕೆಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕೂಡಾ ಇದೇ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅಯೋಧ್ಯೆಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಇನ್ನೊಂದು ದಿನ ಅಲ್ಲಿಗೆ ಹೋಗುತ್ತೇನೆ ಎಂದು ಮೊದಲೇ ಹೇಳಿದ್ದೇನೆ. ನೀವು ಈ ಪ್ರಶ್ನೆಯನ್ನು ಏಕೆ ಪುನರಾವರ್ತಿಸುತ್ತೀರಿ’ ಎಂದು ಸುದ್ದಿಗಾರರನ್ನು ಕೇಳಿದರು.

ಈ ಮಧ್ಯೆ ಬೆಂಗಳೂರಿನಲ್ಲಿಂದು  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಜಯೇಂದ್ರ, ಕಿಷ್ಕಿಂಧಾ ಕ್ಷೇತ್ರವು ವಿಜಯನಗರ ಜಿಲ್ಲೆಯ ಹಂಪಿಯಲ್ಲಿರುವುದರಿಂದ ಶ್ರೀರಾಮನ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ಜನವರಿ 22 ರಂದು ರಜೆ ಘೋಷಿಸಲು ಪರಿಗಣಿಸಬೇಕು ಎಂದು ಹೇಳಿದರು. ರಾಮಾಯಣ ಮಹಾಕಾವ್ಯದ ಪ್ರಕಾರ, ಕಿಷ್ಕಿಂಧಾ ಕ್ಷೇತ್ರವು ವಾನರ ಸಾಮ್ರಾಜ್ಯವಾಗಿತ್ತು. ನೆರೆಯ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟವು ಶ್ರೀರಾಮನ ಕಟ್ಟಾ ಭಕ್ತ ಹನುಮಂತನ ಜನ್ಮಸ್ಥಳವಾಗಿತ್ತು.

“ಶ್ರೀರಾಮ ಮಂದಿರ ಉದ್ಘಾಟನೆ  ಭಾರತಕ್ಕೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ಐತಿಹಾಸಿಕ ಸಂದರ್ಭವಾಗಿದೆ, ಏಕೆಂದರೆ ಅನೇಕ ದೇಶಗಳು ಇದರ ಬಗ್ಗೆ ಸಂತೋಷಪಡುತ್ತಿವೆ. ಆಚರಣೆಗೆ ಅಡ್ಡಿಪಡಿಸುವ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ವಿಜಯೇಂದ್ರ ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!