ಎಂಡೋ ಸಲ್ಫಾನ್ ಪೀಡಿತರಿಗೆ ಸಮಾಜವು ಧೈರ್ಯ ಮತ್ತು ಶಕ್ತಿಯನ್ನು ತುಂಬಬೇಕು: ಸುರೇಶ್ ಶೆಟ್ಟಿ ಗುರ್ಮೆ
ಉಡುಪಿ, ಜ.20: ಎಂಡೋ ಸಲ್ಫಾನ್ ಕುರಿತು ಮುಂದಿನ ದಿನಗಳಲ್ಲಿ ಜಾಗರುಕತೆಯಿಂದ ವರ್ತಿಸಬೇಕು. ಪೀಡಿತರಿಗೆ ಧೈರ್ಯ ಮತ್ತು ಶಕ್ತಿಯನ್ನು ತುಂಬುವಂತಹ ಕಾರ್ಯವನ್ನು ಸಮಾಜವು ಮಾಡಬೇಕಾಗಿದೆ. ಎಂಡೋ ಸಲ್ಫಾನ್ ನಂತಹ ಮಾರಕ ಕಾಯಿಲೆ ದೂರವಾದಂತೆ ಸುಸ್ತಿರ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.
ಅವರು ಇಂದು ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನಸೀಸ್ ಪ್ಯಾಕೇಜಿಂಗ್ ಪಿ.ವಿ.ಟಿ ಹಿರಿಯಡ್ಕ ಮತ್ತು ಒನ್ ಗುಡ್ ಸ್ಟೆಪ್ ಸಂಸ್ಥೆಯ ವತಿಯಿಂದ ಫಿಸಿಯೋಥೆರಪಿ ಉಪಕರಣ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದರು.ಸಮಾಜದಲ್ಲಿ ಹಲವು ವರ್ಷಗಳ ಹಿಂದೆ ಯಾರೋ ಮಾಡಿದ ತಪ್ಪಿಗೆ ಇಂದು ಎಂಡೋ ಸಲ್ಫಾನ್ ಸಂತ್ರಸ್ಥರು ಶಿಕ್ಷೆಯನ್ನು ಅನುಭವಿಸಿಕೊಂಡು ಬಂದಿರುತ್ತಾರೆ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ದೊರಕುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಮಾತನಾಡಿ, ಎಂಡೋಸಲ್ಫಾನ್ ಪೀಡಿತರ ಹಲವು ಬೇಡಿಕೆಗಳಲ್ಲಿ ಉತ್ತಮ ಫಿಸಿಯೋಥೆರಪಿ ಸೌಲಭ್ಯ ಕೂಡ ಒಂದು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪೀಡಿರಿಗೆ ನಗರ ಪ್ರದೇಶಗಳಿಗೆ ತೆರಳಿ ಚಿಕಿತ್ಸೆಯನ್ನು ಪಡೆಯುವುದು ಅಸಾಧ್ಯವಾಗಿರುತ್ತದೆ ಆದ್ದರಿಂದ ಸ್ಥಳೀಯ ಪ್ರದೇಶಗಳಲ್ಲಿ ಎಂಡೋಸಲ್ಫಾನ್ ವಾರ್ಡ್ಗಳ ನಿರ್ಮಾಣವು ಪೀಡಿತರಿಗೆ ಸಹಕಾರಿಯಾಗಲಿದೆ ಎಂದರು.
ಫಿಸಿಯೋಥೆರಪಿ ಸೌಲಭ್ಯವನ್ನು ಎಂಡೋಸಲ್ಫಾನ್ ಪೀಡಿತರು ಮಾತ್ರವಲ್ಲದೇ ಪ್ರತಿಯೊಬ್ಬರು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ, ಮುಂಬಾರುವ ದಿನಗಳಲ್ಲಿ ವಾರ್ಡ್ಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ, ಸ್ಥಳೀಯ ಜನರು ಎಂಡೋಸಲ್ಫಾನ್ ವಾರ್ಡಿನ ಅನುಕೂಲತೆಯನ್ನು ಪಡೆದುಕೊಳ್ಳಬೇಕು ಎಂದರು.
ಒನ್ ಗುಡ್ ಸ್ಟೆಪ್ ಸಂಸ್ಥೆಯ ನಿರ್ದೇಶಕಿ ಅಮಿತಾ ಪೈ ಪ್ರಸ್ತಾವಿಕ ನುಡಿಗಳನ್ನಾಡಿದರು, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ ಐಪಿ ಗಡದ್, ಡಾ ಪ್ರಶಾಂತ್ ಭಟ್, ಜೆನಿಸಿಸ್ ಪ್ಯಾಕೇಜಿಂಗ್ ಪ್ರೈಲಿ.ನ ಮಾಲಕ ಕೌಶಲ್ ವೋರಾ,ಎಂಡೋಸಲ್ಫಾನ್ ಸಂತ್ರಸ್ಥರ ಬೇಡಿಕೆಗಳಿಗಾಗಿ ಶ್ರಮಿಸುತ್ತಿರುವ ಡಾ ರವೀಂದ್ರ ನಾಥ್ ಶಾನುಭಾಗ್, ಜಿಲ್ಲಾ ವಿಕಲಚೇತನ ಅಧಿಕಾರಿ ರತ್ನ, ದಿನೇಶ್ ವೋರಾ ಮತ್ತಿತರು ಉಪಸ್ಥಿತರಿದ್ದರು.
ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸತ್ಯಶಂಕರ್ ಸ್ವಾಗತಿಸಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿಜಯ ಪೈ ನಿರೂಪಿಸಿ ಧನ್ಯವಾದಗೈದರು.