ಪರಿಸರ ಪ್ರೇಮಿ ಪಾಂಗಾಳ ಗೋಪಾಲ ಕೃಷ್ಣ ನಾಯಕ್ ನಿಧನ
ಉಡುಪಿ: ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಕಟಪಾಡಿ ನಾಯಕ್ ಮನೆತನದ ಹಿರಿಯರಾದ, ಸ್ವಾತಂತ್ರ್ಯ ಹೋರಾಟಗಾರ ಪಾಂಗಾಳ ಲಕ್ಷ್ಮೀ ನಾರಾಯಣ ನಾಯಕ್ ಅವರ ಪುತ್ರ ಪಾಂಗಾಳ ಗೋಪಾಲಕೃಷ್ಣ ನಾಯಕ್ (92) ಶನಿವಾರ ಸ್ವಗೃಹದಲ್ಲಿ ನಿಧನರಾದರು.
ಕಟಪಾಡಿಯಲ್ಲಿ ಹೆಸರಾಂತ ನಾಯಕ್ ಆಯುರ್ವೇದಾಶ್ರಮ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದ ಇವರು ಗಾಂಧಿ ತತ್ವದಡಿ ಸರಳ ಜೀವನ ನಡೆಸುತ್ತಿದ್ದವರು. ಅವಿವಾಹಿತರಾಗಿದ್ದ ಇವರು ಸದಾಕಾಲ ಖಾದಿ ಬಟ್ಟೆ ಧರಿಸಿ, ದೇಶಿ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಂಡು ಬಂದವರು.
ಪ್ರಾಣಿ ಪಕ್ಷಿಗಳ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಇವರು ಪರಿಸರ ಪ್ರೇಮಿಯಾಗಿ ಕಟಪಾಡಿ ಭಾಗದಲ್ಲಿ ಗಿಡಮರಗಳ ರಕ್ಷಣೆ ಮಾಡಿಕೊಂಡು ಬಂದವರು. ಆಯುರ್ವೇದ, ಶಾಸ್ತ್ರೀಯ ಸಂಗೀತದ ಬಗ್ಗೆ ಕೂಡಾ ಹೆಚ್ಚಿನ ಒಲವು ಹೊಂದಿದ್ದರು. ತಂದೆಯವರ ಜೊತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೂಡಾ ಇವರು ಗುರುತಿಸಿಕೊಂಡಿದ್ದರು.
ಸಹೋದರ ಡಾ.ಪಾಂಗಾಳ ಸೀತಾರಾಮ ನಾಯಕ್ ಸೇರಿದಂತೆ ಇಬ್ಬರು ಸಹೋದರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಗೋಪಾಲಕೃಷ್ಣ ನಾಯಕ್ ಅವರ ಸ್ವಇಚ್ಛೆಯಂತೆ ಪಾರ್ಥಿವ ಶರೀರವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾನ ಮಾಡಲಾಯಿತು. ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಕುಟುಂಬದ ವರು ದೇಹವನ್ನು ಹಸ್ತಾಂತರಿಸಿದರು.
ಸಂತಾಪ: ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್,ಕಟಪಾಡಿ ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಡಿ. ಕಿಣಿ, ಸಂಚಾಲಕ ಕೆ.ಸತ್ಯೇಂದ್ರ ಪೈ, ಮಣಿಪಾಲ ರಂಗ ಪೈ, ಕಟಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರಭಾ ವಿ.ಶೆಟ್ಟಿ, ಎಸ್ ವಿ ಎಸ್ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್ ಸಂತಾಪ ಸೂಚಿಸಿದ್ದಾರೆ.