ಪುತ್ತಿಗೆ ಶ್ರೀಗಳಿಗೆ ಕೃಷ್ಣ ಪೂಜೆಯ ಅಧಿಕಾರ ಹಸ್ತಾಂತರಿಸಿದ ಅದಮಾರು ಶ್ರೀಗಳು

ಉಡುಪಿ, ಜ.18: ಹದಿನಾಲ್ಕು ‌ವರ್ಷದ ಹಿಂದೆ ತಮ್ಮ ಮೂರನೇ ಪರ್ಯಾಯದಂತೆ ಇಂದು ಬೆಳಗಿನ ಜಾವ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ನಾಲ್ಕನೇ ಪರ್ಯಾಯದ ಎಲ್ಲಾ ಸಾಂಪ್ರದಾಯಿಕ, ಧಾರ್ಮಿಕ ವಿಧಿವಿಧಾನಗಳು ಅಷ್ಟ ಮಠಗಳಲ್ಲಿ ಏಳು ಮಠಾಧೀಶರ ಗೈರುಹಾಜರಿಯಲ್ಲಿ ನೆರವೇರಿದವು.

ಮೊದಲು ನಡೆದ ಪರ್ಯಾಯ ಮೆರವಣಿಗೆಯಲ್ಲಿ ಪರ್ಯಾಯ ಪೀಠ ಏರುವ ಪುತ್ತಿಗೆ ಶ್ರೀ ಹಾಗೂ ಅವರ ಪಟ್ಟ ಶಿಷ್ಯ ಶ್ರೀಸುಶ್ರೀಂದ್ರ ತೀರ್ಥರು ಮಾತ್ರ ಪಾಲ್ಗೊಂಡಿದ್ದು ಉಳಿದ ಏಳು ಮಂದಿ ಮಠಾಧೀಶರು ಅವರ ಶಿಷ್ಯರೊಂದಿಗೆ ಗೈರಾಗಿದ್ದರು.

ಮೆರವಣಿಗೆ ರಥಬೀದಿ ಮೂಲಕ ಶ್ರೀಕೃಷ್ಣ ಮಠ ಪ್ರವೇಶಿಸಿದ ಬಳಿಕದ ಎಲ್ಲಾ ಸಂಪ್ರದಾಯಗಳು ಉಳಿದ ಮಠಗಳ ಅನುಪಸ್ಥಿತಿಯಲ್ಲಿ ಜರುಗಿದವು.

ಎರಡು ವರ್ಷಗಳ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿ ಇಂದು ಪುತ್ತಿಗೆ ಶ್ರೀಗೆ ಅಧಿಕಾರ ಹಸ್ತಾಂತರಿಸಬೇಕಿದ್ದ ಕೃಷ್ಟಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ತಮಗೆ ಕಡ್ಡಾಯವಾಗಿದ್ದ ಯಾವ ವಿಧಿವಿಧಾನಗಳನ್ನೂ ನೆರವೇರಿಸದೇ ತಮ್ಮ ಮಠಕ್ಕೆ ಹಿಂದಿರುಗಿದ್ದರು.

ಹೀಗಾಗಿ ಮಠಾಧೀಶರ ಅನುಪಸ್ಥಿತಿಯ ನಡುವೆ ಅದಮಾರು ಮಠದ ಹಿರಿಯಶ್ರೀಗಳಾದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಪುತ್ತಿಗೆ ಶ್ರೀಗೆ ಅಧಿಕಾರ ಹಸ್ತಾಂತರ ಮಾಡಿದರು.

ಕೃಷ್ಣಾಪುರ ಸ್ವಾಮೀಜಿ ಅನುಪಸ್ಥಿತಿಯಲ್ಲಿ ಪುತ್ತಿಗೆ ಶ್ರೀಗೆ ಸರ್ವಜ್ಞ ಪೀಠಾರೋಹಣವನ್ನೂ ಅದಮಾರು ಶ್ರೀಯವರೇ ಮಾಡಿಸಿದರು. ಈ ಎಲ್ಲಾ ಧಾರ್ಮಿಕ ವಿಧಿವಿಧಾನಗಳ ನಿರ್ವಹಣೆಯನ್ನು ಅದಮಾರು ಶ್ರೀ ವಿಶ್ವಪ್ರಿಯ ತೀರ್ಥರೇ ನೆರವೇರಿಸಿದರು.

ಕೃಷಮಠದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರಿಗೆ ಅಧಿಕಾರ ಹಸ್ತಾಂತರಿಸಿದ ಅದಮಾರು ಶ್ರೀ ಮಠದ ಕೀಲಿಕೈ, ಅಕ್ಷಯ ಪಾತ್ರೆ ಹಾಗೂ ಸೆಟ್ಟುಗ ಹಸ್ತಾಂತರ ಮಾಡಿದರು. ಈ ಎಲ್ಲಾ ಪೂಜಾಧಿಕಾರ ಹಸ್ತಾಂತರದ ನಂತರ ಅರಳು ಗದ್ದುಗೆಯಲ್ಲಿ ಖಾಸಗಿ ದರ್ಬಾರ್ ನಡೆಯಿತು.

ಖಾಸಗಿ ದರ್ಬಾರಿನ ಬಳಿಕ ಪುತ್ತಿಗೆ ಶ್ರೀಗಳಿಬ್ಬರು ರಾಜಾಂಗಣದಲ್ಲಿ ಸಾರ್ವಜನಿಕ ದರ್ಬಾರಿನಲ್ಲಿ ಭಾಗವಹಿಸಿದರು.

ಪರ್ಯಾಯ ದರ್ಬಾರ್ನಲ್ಲಿ ವಿಧಾನಸಭಾ ಸಭಾಪತಿ ಯು.ಟಿ.ಖಾದರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸಹಿತ ಹಲವು ಗಣ್ಯರು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ನಾಡಿನ ಮೂರು ವರ್ಷದ ತೆಲುಗು ಮೂಲದ ಅಮೆರಿಕದ ಬಾಲಕಿ ಕೋಕಿಲ ಸೇರಿದಂತೆ ನಾಡಿನ ಹಲವು ಹಿರಿಯ ವಿದ್ವಾಂಸರನ್ನು ದರ್ಬಾರ್ ನಲ್ಲಿ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಪುತ್ತಿಗೆ ಶ್ರೀ ಸನ್ಮಾನಿಸಿದರು.

Leave a Reply

Your email address will not be published. Required fields are marked *

error: Content is protected !!