ಕೃಷ್ಣನಿಗೆ ಚಿನ್ನದ ರಥ ಸಮರ್ಪಿಸುವ ಸಂಕಲ್ಪ: ಪರ್ಯಾಯ ಪುತ್ತಿಗೆ ಶ್ರೀ

ಉಡುಪಿ: ಪರ್ಯಾಯ ಮಹೋತ್ಸವಕ್ಕೆ ಸಹಕರಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಅವರಿಗೆ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿನಂದನೆ ಸಲ್ಲಿಸಿದರು. ಪುತ್ತಿಗೆ ಪರ್ಯಾಯೋತ್ಸವಕ್ಕೆ ಸಚಿವರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.

ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಶ್ರೀ ಪುತ್ತಿಗೆ ಪರ್ಯಾಯೋತ್ಸವದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಗಳು, ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಚಿವರಾಗಿ ಬಂದಿರುವುದಕ್ಕಿಂತ ಹೆಚ್ಚಾಗಿ, ಕೃಷ್ಣ ಭಕ್ತೆಯಾಗಿ ಕುಟುಂಬ ಸಮೇತ ಪರ್ಯಾಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಆರಂಭಿಕ ಹಂತದಿಂದಲೂ ಸಚಿವರು ಪರ್ಯಾಯದ ಯಶಸ್ಸಿಗೆ ಶ್ರಮಿಸಿದ್ದಾರೆ ಎಂದರು.

ಚಿನ್ನದ ರಥ ನೀಡುವ ಸಂಕಲ್ಪ:
ತಾವು ನಾಲ್ಕನೇ ಬಾರಿಗೆ ಪರ್ಯಾಯ ಅಲಂಕರಿಸುತ್ತಿದ್ದು, ಸನ್ಯಾಸ ಆಶ್ರಮ ಪೂರೈಸಿ 50 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಕೃಷ್ಣನಿಗೆ ಚಿನ್ನದ ರಥ ಸಮರ್ಪಿಸುವ ಸಂಕಲ್ಪ ಹೊಂದಿದ್ದೇನೆ ಎಂದರು. ವಿದೇಶ ಪ್ರವಾಸಕ್ಕಿಂತ ಕೃಷ್ಣ ಪೂಜೆಯೇ ಮುಖ್ಯವಾಗಿದ್ದು, ಈ ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ಸಂಪೂರ್ಣ ಸಮಯವನ್ನು ಕೃಷ್ಣನ ಪೂಜೆಗೆ ಮೀಸಲಿಡುವೆ ಎಂದರು. ಪುತ್ತಿಗೆ ಪರ್ಯಾಯ ವಿಶ್ವ ಗೀತ ಪರ್ಯಾಯವಾಗಿರಲಿದೆ ಎಂದು ಶ್ರೀಗಳು ಹೇಳಿದರು.

ಈ ವೇಳೆ ಕಿರಿಯ ಯತಿಗಳಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಇಸ್ಕಾನ್ ಮುಖ್ಯಸ್ಥ ಮಧು ಪಂಡಿತ್ ದಾಸ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ , ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಶ್ರೀ ಕೃಷ್ಣನ ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!