ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ಪದಕ, ವೈದ್ಯಕೀಯ ವೆಚ್ಚ 1,500 ರೂ.ಗೆ ಹೆಚ್ಚಳ- ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ಪದಕ ನೀಡಲಾಗುವುದು ಮತ್ತು ವೈದ್ಯಕೀಯ ವೆಚ್ಚವನ್ನು 1 ಸಾವಿರದಿಂದ 1,500 ರೂ.ಗೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಘೋಷಿಸಿದ್ದಾರೆ.
ರಾಜ್ಯದಲ್ಲಿ ಭವ್ಯವಾದ ಸುಸಜ್ಜಿತ ಸುವರ್ಣ ಪೊಲೀಸ್ ಭವನ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಬಜೆಟ್ ನಲ್ಲಿ ಹಣ ನಿಗದಿ ಮಾಡುತ್ತೇನೆ. ಸಿಇಎನ್ ಠಾಣಾಧಿಕಾರಿಗಳ ಹುದ್ದೆಯನ್ನು ಎಸಿಪಿ ಮತ್ತು ಡಿಸಿಪಿ ಮಟ್ಟಕ್ಕೆ ಉನ್ನತೀಕರಿಸಲಾಗುವುದು ಮತ್ತು ಬೆಂಗಳೂರು ನಗರದಲ್ಲಿ 8 ಅಡಿಷನಲ್ ಡಿಸಿಪಿ ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಜಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಇಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. 2013 ರಿಂದ ಪೊಲೀಸರ ವೈದ್ಯಕೀಯ ತಪಾಸಣೆ ಭತ್ಯೆಯನ್ನ ಹೆಚ್ಚಿಸಿರಲಿಲ್ಲ. ಪೊಲೀಸ್ ಸಿಬ್ಬಂದಿಯ ವೈದ್ಯಕೀಯ ತಪಾಸಣೆ ಭತ್ಯೆ 500 ರೂ. ಹೆಚ್ಚಳ ಮಾಡುತ್ತೇವೆ. ಈ ಹಿಂದೆ 1 ಸಾವಿರ ನೀಡಲಾಗಿತ್ತು, ಈಗ 1,500 ರೂ.ಗೆ ಹೆಚ್ಚಿಸಿದ್ದೇವೆ ಎಂದು ಸಿಎಂ ತಿಳಿಸಿದರು.
ಪೊಲೀಸರಿಗೆ ನಮ್ಮ ಸರ್ಕಾರ ಸಂಪೂರ್ಣ ಫ್ರೀ ಹ್ಯಾಂಡ್ ಕೊಟ್ಟಿದೆ. ಪೊಲೀಸರ ಕೆಲಸದಲ್ಲಿ ಮೂಗು ತೂರಿಸ ಬಾರದು ಎನ್ನುವುದು ನನ್ನ ಬದ್ಧತೆ. ಆದರೆ ನಾವು ಫ್ರೀ ಹ್ಯಾಂಡ್ ಕೊಟ್ಟಿದ್ದು ದುರುಪಯೋಗ ಆಗಬಾರದು. ಅದು ಜನರಿಗೆ ಅನುಕೂಲ ಆಗುವಂತಿರಬೇಕು ಎಂದು ಸಿಎಂ ಎಚ್ಚರಿಕೆ ನೀಡಿದರು.
ನಮ್ಮದು ಜಾತ್ಯತೀತ ರಾಷ್ಟ್ರ. ನಾವುಗಳೇ ನಮ್ಮ ಸಂವಿಧಾನದ ಆಶಯಗಳನ್ನು ಬಲಪಡಿಸಬೇಕು ಶೋಷಣೆಗೆ ಒಳಗಾದವರಿಗೆ ವ್ಯವಸ್ಥೆ ಮೇಲೆ ನಂಬಿಕೆ ಬರಬೇಕಾದರೆ ದೌರ್ಜನ್ಯ ಪ್ರಕರಣಗಳ ತನಿಖೆಯ ಗುಣಮಟ್ಡ ಹೆಚ್ಚಾಗ ಬೇಕು. ವೈಜ್ಞಾನಿಕವಾಗಿ ಸಮರ್ಥ ಆರೋಪ ಪಟ್ಟಿ ಸಲ್ಲಿಕೆಯಾಗಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸಲಹೆ ನೀಡಿದರು.