‘ನಾನಾಗಲಿ, ನನ್ನ ಮಗ ಯತೀಂದ್ರನಾಗಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’: ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ‘ನಾನಾಗಲಿ, ನನ್ನ ಮಗ ಯತೀಂದ್ರನಾಗಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಯತೀಂಧ್ರ ಸಿದ್ದರಾಮಯ್ಯ ಸ್ಪರ್ಧೆ ಕುರಿತು ಉದ್ಭವವಾಗಿರುವ ಚರ್ಚೆಗೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ, ‘ಲೋಕಸಭೆ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದಿಂದ ಯತೀಂದ್ರ ಸಿದ್ದರಾಮಯ್ಯ ತಮ್ಮ ವಿರುದ್ಧ ಸ್ಪರ್ಧಿಸುತ್ತಾರೆ ಅಂತ ಸಂಸದ ಪ್ರತಾಪ್​ ಸಿಂಹ ಅವರಿಗೆ ಭಯ ಶುರುವಾಗಿದೆ. ಹೀಗಾಗಿ ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಹೇಳಿದರು.

ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆ ಕ್ಷೇತ್ರಗಳ ಶಾಸಕರು, ಸ್ಥಳೀಯ ಮುಖಂಡರು ಮತ್ತು ಪಕ್ಷದ ಪದಾಧಿಕಾರಿಗಳ ಶಿಫಾರಸುಗಳನ್ನು ಆಧರಿಸಿ ಟಿಕೆಟ್ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ಯಾವುದೇ ವೈಯಕ್ತಿಕ ಆಯ್ಕೆಯನ್ನು ಆಧರಿಸಿ ಅಲ್ಲ. ಪ್ರತಾಪ್ ಸಿಂಹ ಭಯಗೊಂಡಿದ್ದಾರೆ, ಅದಕ್ಕಾಗಿಯೇ ಅವರು ಯತೀಂದ್ರ ಸ್ಪರ್ಧಿಸುತ್ತಾರೆ ಎಂದು ಹೇಳುತ್ತಿದ್ದಾರೆ. ನಾನು ಅಥವಾ ಯತೀಂದ್ರ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇವೆ ಎಂದೂ ಹೇಳಿಲ್ಲ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವೀಕ್ಷಕರಾಗಿ ರಾಜ್ಯ ನಗರಾಭಿವೃದ್ಧಿ ಸಚಿವ ಸುರೇಶ ಬಿಎಸ್ (ಬೈರತಿ) ಅವರನ್ನು ನೇಮಿಸಲಾಗಿದೆ. ಸುರೇಶ್ ಅವರು ಸಂಭಾವ್ಯ ಅಭ್ಯರ್ಥಿಗಳ ವರದಿಯನ್ನು ಸಲ್ಲಿಸಿದ್ದು, ಅದರ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಪ್ರತಾಪ್​ ಸಿಂಹ ಹೇಳಿದ್ದೇನು?
ಯತೀಂದ್ರ ಸ್ಪರ್ಧೆ ಮಾಡಿದರೆ ಸಿಎಂ ಪುತ್ರ-ಪತ್ರಕರ್ತನ ನಡುವೆ ಫೈಟ್ ನಡೆಯುತ್ತದೆ. ಯಾವತ್ತೂ ಎದುರಾಳಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಎದುರು ಯಾವ ಎದುರಾಳಿಯ ಹೆಸರು ಕೂಡ ನಡೆಯುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಅವರು ಎದುರಾಳಿಯಾದರೆ ಒಳ್ಳೆಯದು ಎಂದು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದರು.

Leave a Reply

Your email address will not be published. Required fields are marked *

error: Content is protected !!