ಲೋಕಸಭಾ ಚುನಾವಣೆ: ಕರ್ನಾಟಕದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಮತ್ತು ತೆಲಂಗಾಣದ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಸಾಧ್ಯತೆಯಿದೆ. 

ಕರ್ನಾಟಕದ ಸ್ಥಳೀಯ ಕಾಂಗ್ರೆಸ್ ಘಟಕಕ್ಕೆ ತಿಳಿಸದೆ ಎಐಸಿಸಿ ಕೊಪ್ಪಳ ಕ್ಷೇತ್ರದಲ್ಲಿ ಈಗಾಗಲೇ ಸಮೀಕ್ಷೆ ನಡೆಸಿದೆ. ತೆಲಂಗಾಣದ ಮತ್ತೊಂದು ಸ್ಥಾನದಿಂದ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಲು ಯೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೊಪ್ಪಳ ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದ್ದು, 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕಾಂಗ್ರೆಸ್‌ನಲ್ಲಿವೆ. ಎಐಸಿಸಿ ಕೈಗೊಂಡಿರುವ ಸಮೀಕ್ಷೆಯು ಪ್ರಿಯಾಂಕಾ ಗಾಂಧಿಗೆ ಸುರಕ್ಷಿತ ಸ್ಥಾನ ಎಂದು ಸೂಚಿಸಿದೆ. ಪ್ರಸ್ತುತ ಕೊಪ್ಪಳ ಕ್ಷೇತ್ರವನ್ನು ಬಿಜೆಪಿಯ ಕರಡಿ ಸಂಗಣ್ಣ ಪ್ರತಿನಿಧಿಸುತ್ತಿದ್ದಾರೆ.

ಈ ಹಿಂದೆ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು 1978 ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದ ನಂತರ ರಾಜಕೀಯ ಪುನರ್ಜನ್ಮ ಪಡೆದಿದ್ದರು. ಪ್ರಸ್ತುತ ಈ ಕ್ಷೇತ್ರವನ್ನು ಉಡುಪಿ-ಚಿಕ್ಕಮಗಳೂರು ಎಂದು ಕರೆಯಲಾಗುತ್ತದೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರತಿನಿಧಿಸುತ್ತಿದ್ದಾರೆ.

ಸೋನಿಯಾ ಗಾಂಧಿ ಅವರು 1999 ರಲ್ಲಿ ಕರ್ನಾಟಕದ ಬಳ್ಳಾರಿ ಕ್ಷೇತ್ರದಿಂದ ದಿ. ಹಿರಿಯ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ವಿರುದ್ಧ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು.  ಪ್ರಿಯಾಂಕಾ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಿದರೆ, ಅದು ಕಾಂಗ್ರೆಸ್‌ಗೆ ರಾಜ್ಯಾದ್ಯಂತ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಇದು ಬಿಜೆಪಿ ವಿರುದ್ಧ ಹೋರಾಡಲು ಕಾರ್ಯಕರ್ತರಲ್ಲಿ ಹುರುಪು ನೀಡುತ್ತದೆ ಎಂದು ಮೂಲಗಳು ಹೇಳಿವೆ. 

ಈ ಹಿಂದೆ ರಾಜ್ಯ ಕಾಂಗ್ರೆಸ್ ನಾಯಕರು ಗಾಂಧಿ ಕುಟುಂಬದವರು ಕರ್ನಾಟಕದಿಂದ ಸ್ಪರ್ಧಿಸಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!