ಅನಧಿಕೃತ ಶಾಲೆಗಳ ಪಟ್ಟಿ ಮಾಡಿ, ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸುವಂತೆ ಸೂಚನೆ

ಬೆಂಗಳೂರು: ಅನಧಿಕೃತ ಶಾಲೆಗಳನ್ನು ಪಟ್ಟಿ ಮಾಡಿ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಬೇಕು. ಅನಧಿಕೃತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಅಧಿಕೃತ ಶಾಲೆಗೆ ದಾಖಲು ಮಾಡಲು ಕ್ರಮ ವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಉಪನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಅವರು, ಅನಧಿಕೃತ ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಲ್ಲಿ ಅವರ ಶೈಕ್ಷಣನಿಕ ದಾಖಲೆಗಳನ್ನು ಅಧಿಕೃಗೊಳಿಸಿ ನೀಡಲು ಸಾಧ್ಯವಾಗುವುದಿಲ್ಲ. ಹಾಗಯೇ ಶೈಕ್ಷಣಿಕ ಪ್ರಗತಿಯನ್ನು ಪರಿಗಣಿಸಲು ಅವಕಾಶ ಇರುವುದಿಲ್ಲ. ಒಂದು ವೇಳೆ ಇಂತಹ ಶಾಲೆಗಳ ಮಕ್ಕಳ ಮುಂದಿನ ವ್ಯಾಸಾಂಗಕ್ಕಾಗಿ, ಉದ್ಯೋಗಕ್ಕಾಗಿ ಶೈಕ್ಷಣಿಕ ದಾಖಲೆಗಳನ್ನು ಅಧಿಕೃತ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೋಷಕರಿಗೆ ಮಾಹಿತಿಯನ್ನು ನೀಡಬೇಕು ಎಂದಿದ್ದಾರೆ.

ಪೋಷಕರು ತಮ್ಮ ಮಕ್ಕಳನ್ನು ಅಧಿಕೃತ ಶಾಲೆಗೆ ದಾಖಲುಪಡಿಸುವುದು ಕಡ್ಡಾಯವಾಗಿರುತ್ತದೆ. ಹಾಗಾಗಿ ರಾಜ್ಯದ ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಧಿಕೃತ ಹಾಗೂ ಅನಧಿಕೃತ ಶಾಲೆಗಳ ಮಾಹಿತಿಯನ್ನು ಪ್ರಕಟಿಸುವುದು ಅಗತ್ಯವಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಗಳು ತಮ್ಮ ವ್ಯಾಪ್ತಿಯಲ್ಲಿ ಇಲಾಖೆಯಿಂದ ನೋಂದಣಿ ಮತ್ತು ಮಾನ್ಯತೆ ಪಡೆದ ಖಾಸಗಿ ಶಾಲೆಗಳ ವಿವರಗಳ ನ್ನು ಪೋಷಕರಿಗೆ ಅನುಕೂಲವಾಗುವಂತೆ ಕಚೇರಿಯ ಆವರಣದಲ್ಲಿ ಮಾಹಿತಿಯನ್ನು ಪ್ರಕಟಿಸಬೇಕು. ಸಾರ್ವಜನಿಕರಿಗೆ ಗೋಚರವಾಗುವಂತೆ ಶಾಲೆಯ ಹೆಸರು, ಮಾಧ್ಯಮ ಮತ್ತು ಪಠ್ಯಕ್ರಮ, ವಿಳಾಸದ ವಿವರಗಳನ್ನು ಪ್ರಕಟಿಸಬೇಕು ಎಂದು ತಿಳಿಸಿದ್ದಾರೆ.

ಒಂದು ವೇಳೆ ಕ್ಷೇತ್ರಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಇಲಾಖೆಯ ಅನುಮತಿ ಇಲ್ಲದೆ ಖಾಸಗಿ ಶಾಲೆಗಳನ್ನು ಪ್ರಾರಂಭಿಸಿದ್ದಲ್ಲಿ ಅಂತಹ ಶಾಲೆಗಳ ಪಟ್ಟಿಯನ್ನು ಹಾಗೂ ಕೇಂದ್ರ ಪರೀಕ್ಷಾ ಮಂಡಳಿ ಸಂಯೋಜನೆ ಹೊಂದದೇ ಇರುವ ಶಾಲೆಗಳ ಪಟ್ಟಿಯನ್ನು ಪ್ರಕಟಿಸಬೇಕು. ಹಾಗೆಯೇ ಇಂತಹ ಶಾಲೆಗಳ ಪಟ್ಟಿಯನ್ನು ಸ್ಥಳೀಯ ದಿನಪತ್ರಿಕೆಗಳಲ್ಲಿ ಸಾರ್ವಜನಿಕರಿಗೆ ಮಾಹಿತಿಗಾಗಿ ಪ್ರಕಟಿಸಬೇಕು ಎಂದು ಹೇಳಿದ್ದಾರೆ.

ಶಾಲಾ ನೋಂದಣಿ/ಅನುಮತಿ ಪಡೆಯದೇ ನಡೆಯುತ್ತಿರುವ ಶಾಲೆಗಳು, ನೋಂದಣಿ ಇಲ್ಲದೆ ಅನಧಿಕೃತವಾಗಿ ಉನ್ನತೀರಿಸಿದ ತರಗತಿಗಳನ್ನು ನಡೆಸುತ್ತಿರವ ಶಾಲೆಗಳು, ರಾಜ್ಯ ಪಠ್ಯಕ್ರಮದಲ್ಲಿ ಬೋಧಸಲು ಅನುಮತಿ ಪಡೆದು ಅನಧಿಕೃತವಾಗಿ ಕೇಂದ್ರ ಪಠ್ಯಕ್ರಮದಲ್ಲಿ ಬೋಧಿಸುತ್ತಿರವ ಶಾಲೆಗಳು ಅನಧಿಕೃತ ಶಾಲೆಗಳಾಗಿರುತ್ತವೆ.

ನೋಂದಣಿ ಪಡೆದ ಮಾಧ್ಯಮದಲ್ಲಿ ಬೋಧಿಸದೇ ಅನಧಿಕೃತವಾಗಿ ಬೇರೆ ಮಾಧ್ಯಮದಲ್ಲಿ ಬೋಧಿಸುತ್ತಿರುವ ಶಾಲೆಗಳು, ಅನಧಿಕೃತವಾಗಿ ಹೆಚ್ಚುವರಿ ವಿಭಾಗಗಳನ್ನು ಹೊಂದಿರುವಂತಹ ಶಾಲೆಗಳು, ಇಲಾಖೆಯ ಪೂರ್ವಾನುಮತಿ ಇಲ್ಲದೇ ಸ್ಥಳಾಂತರ ಅಥವಾ ಹಸ್ತಾಂತರಗೊಂಡ ಶಾಲೆಗಳು, ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಿದ ನಂತರ ಅದೇ ಕಟ್ಟಡದಲ್ಲಿ ಅನಧಿಕೃತವಾಗಿ ರಾಜ್ಯ ಪಠ್ಯಕ್ರಮದಲ್ಲಿ ಮುಂದುವರೆಸುತ್ತಿರುವ ಶಾಲೆಗಳು ಅನಧಿಕೃತ ಶಾಲೆಗಳಾಗಿರುತ್ತವೆ ಎಂದು ಆಯುಕ್ತರು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಅನುಮತಿಯನ್ನು ಪಡೆದು ಶಾಲೆಗಳನ್ನು ನಡೆಸುತ್ತಿರುವ ಆಡಳಿತ ಮಂಡಳಿಗಳು ಶಾಲೆಯನ್ನು ಮುಚ್ಚಲು ನಿರ್ಧರಿಸಿದ್ದರೆ, ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಗೆ ಹಾಗೂ ಇಲಾಖೆಗೆ ಒಂದು ಶೈಕ್ಷಣಿಕ ವರ್ಷದ ಮೊದಲೆ ತಿಳಿಸುವುದು ಶಿಕ್ಷಣ ಇಲಾಖೆಯ ನಿಯಮಗಳ ಅನ್ವಯ ಕಡ್ಡಾಯವಾಗಿರು ತ್ತದೆ. ಈ ನಿಯಮವನ್ನು ಪಾಲಿಸದೆ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಅಥವಾ ಮಧ್ಯಂತರದಲ್ಲಿ ಶಾಲೆಗಳನ್ನು ಮುಚ್ಚಿದ್ದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕು.

ರಾಜ್ಯ ಪಠ್ಯಕ್ರಮದಲ್ಲಿ ಅನುಮತಿಯನ್ನು ಪಡೆದು, ಶಾಲೆಯಲ್ಲಿ ಅನಧಿಕೃತವಾಗಿ ಕೇಂದ್ರ ಪಠ್ಯಕ್ರಮ ಬೋಧನೆ ಮಾಡುತ್ತಿರುವ ಶಾಲೆಗಳ ಪಟ್ಟಿಯನ್ನು ಪ್ರಕಟಿಸಿ, ಅಂತಹ ಶಾಲೆಗಳ ವಿರುದ್ದ ಸಂಬಂಧಪಟ್ಟ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕು ಎಂದು ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!