‘ಯಕ್ಷಗಾನ ಪೂರ್ವರಂಗ ಅಧ್ಯಯನ’ ಶಿವಕುಮಾರ ಅಳಗೋಡುಗೆ ಪಿಎಚ್‌ಡಿ ಪದವಿ

ಉಡುಪಿ: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪದವಿ ವಿಭಾಗದ ಕನ್ನಡ ಉಪನ್ಯಾಸಕ, ಹವ್ಯಾಸಿ ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥಧಾರಿ, ಛಂದೋ ಬದ್ಧ ಯಕ್ಷಕ, ಶಿವಕುಮಾರ ಅಳಗೋಡು ಅವರು ಯಕ್ಷಗಾನದಲ್ಲಿ ಮಾಡಿರುವ ಸಂಶೋಧನೆಗಾಗಿ ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ.
ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಅರುಣ್ ಕುಮಾರ್ ಎಸ್.ಆರ್. ಮಾರ್ಗದರ್ಶನದಲ್ಲಿ ಶಿವಕುಮಾರ್ ಅವರು ಪಿಹೆಚ್‌ಡಿ ಪದವಿಗಾಗಿ ಮಂಡಿಸಿರುವ ‘ಯಕ್ಷಗಾನ ಪೂರ್ವರಂಗ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿದೆ.
ಶಿವಕುಮಾರ್ ದ್ವಿತೀಯ ರ್ಯಾಂಕ್‌ನೊಂದಿಗೆ ಮಂಗಳೂರು ವಿವಿಯಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದು, ಎನ್‌ಇಟಿ, ಕೆಎಸ್‌ಇಟಿ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿದ್ದಾರೆ. 9 ವಿಭಿನ್ನ ಕೃತಿಗಳನ್ನು ಪ್ರಕಟಿಸಿರುವ ಇವರು ಶಿವಮೊಗ್ಗ ಜಿಲ್ಲೆ ಹೊಸ ನಗರ ತಾಲೂಕಿನ ನಿಟ್ಟೂರು ಅಳಗೋಡು ಸಮೀಪದ ಗೀತಾ ಮತ್ತು ಅನಂತಮೂರ್ತಿ ದಂಪತಿಗಳ ಪುತ್ರರಾಗಿದ್ದಾರೆ.