ಕುಂದಾಪುರ: ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿದ 20 ಮೊಬೈಲ್‌ಗಳ ಹಸ್ತಾಂತರ

ಕುಂದಾಪುರ: ಕಳೆದ ಒಂದು ವರ್ಷದಲ್ಲಿ (2023ರ ಜನವರಿಯಿಂದ ಡಿಸೆಂಬರ್ ತಿಂಗಳವರೆಗೆ) ಮೊಬೈಲ್ ಕಳೆದುಕೊಂಡು ಸಿಇಐಆರ್ ಪೋರ್ಟಲ್ ಮೂಲಕ ಪೊಲೀಸರಿಗೆ ದೂರು ನೀಡಿದವರ 20 ಮೊಬೈಲ್ ಫೋನುಗಳನ್ನು ಕುಂದಾಪುರ ಪೊಲೀಸರು ಪತ್ತೆ ಮಾಡಿದ್ದು ಗುರುವಾರದಂದು ಪೊಲೀಸ್ ಠಾಣೆಯಲ್ಲಿ ಮೊಬೈಲ್ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಜಾರ್ಖಂಡ್, ಆಂಧ್ರದಿಂದ 2 ಫೋನ್ ವಾಪಾಸ್: ದಾಖಲಾದ ದೂರು ಆಧರಿಸಿ ಪ್ರಕರಣದ ಬೆನ್ನುಬಿದ್ದ ಪೊಲೀಸರು ಸಿಇಐಆರ್ (ಸೆಂಟ್ರಲ್ ಇಕ್ಯುಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್) ಪೋರ್ಟಲ್ ಮೂಲಕ ತನಿಖೆ ಕೈಗೊಂಡು 20 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದಾರೆ. ಇದರಲ್ಲಿ ಒಂದು ಮೊಬೈಲ್ ಜಾರ್ಖಂಡ್ ಹಝಾರಿ ಭಾಗ್ ಎಂಬಲ್ಲಿ ಮತ್ತು ಇನ್ನೊಂದು ಮೊಬೈಲನ್ನು ಆಂಧ್ರಪ್ರದೇಶದ ಗೊಂಡ ಎಂಬಲ್ಲಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತೀರ್ಥಹಳ್ಳಿ, ಬೆಂಗಳೂರು ಸಹಿತ ಕರ್ನಾಟಕದ ವಿವಿಧೆಡೆ ಗಳಿಂದ ಉಳಿದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅನ್‌ಬ್ಲಾಕ್ ಪ್ರಾತ್ಯಕ್ಷಿಕೆ: ವಾರಸುದಾರರಿಗೆ ನೀಡಿದ ಮೊಬೈಲ್‌ಗಳನ್ನು ಸಿಇಐಆರ್ ಆ್ಯಪ್ ಮೂಲಕ ಅನ್‌ಬ್ಲಾಕ್ ಮಾಡಿ, ಮತ್ತೆ ಬಳಸುವ ಬಗ್ಗೆ ಸಾರ್ವಜನಿಕರಿಗೆ ಗುರುವಾರ ಬೆಳಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಾತ್ಯಕ್ಷಿಕೆ ನೀಡಿದರು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಎಸ್.ಟಿ.ಸಿದ್ಧಲಿಂಗಪ್ಪ ನಿರ್ದೇಶನದಲ್ಲಿ ಕುಂದಾಪುರ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ ನೇತೃತ್ವದಲ್ಲಿ, ಕುಂದಾಪುರ ನಗರ ಠಾಣೆ ನಿರೀಕ್ಷಕ ನಂದಕುಮಾರ್, ಉಪ ನಿರೀಕ್ಷಕರಾದ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಪ್ರಸಾದ್ ಮತ್ತು ಸಿಬ್ಬಂದಿಗಳಾದ ಸಿದ್ಧಪ್ಪ, ಮಾರುತಿ, ಅವಿನಾಶ ಕಾರ್ಯಾಚರಣೆ ನಡೆಸಿದ್ದರು.

“ಕುಂದಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ದೂರುದಾರರು ಕಳೆದುಕೊಂಡ ಸುಮಾರು 2.50 ಲಕ್ಷ ಮೌಲ್ಯದ ಒಟ್ಟು 20 ಮೊಬೈಲ್ ಫೋನ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಪತ್ತೆ ಮಾಡಲು ಸಿಇಐಆರ್ ಪೋರ್ಟಲ್‌ನಿಂದ ಪೊಲೀಸರಿಗೆ ಅನುಕೂಲವಾಗುತ್ತದೆ. ಅಲ್ಲದೆ ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್‌ಗಳ ದುರ್ಬಳಕೆಯನ್ನು ತಡೆಗಟ್ಟಲು ಇದು ಸಹಕಾರಿ. ಸಾರ್ವಜನಿಕರು ಮೊಬೈಲ್ ಫೋನ್ ಕಳೆದುಕೊಂಡಲ್ಲಿ ತಕ್ಷಣ ಫೋರ್ಟಲ್ ಮೂಲಕ ದೂರು ನಮೂದಿಸಿ”.

ಡಾ. ಅರುಣ್ ಕೆ., ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Leave a Reply

Your email address will not be published. Required fields are marked *

error: Content is protected !!