ಪುತ್ತಿಗೆ ಪರ್ಯಾಯ- ಕರ್ನಾಟಕ ಬ್ಯಾಂಕಿನಿಂದ ಹೊರಕಾಣಿಕೆ
ಉಡುಪಿ: ಜ.18ರಂದು ನಡೆಯುವ ಪುತ್ತಿಗೆ ಮಠದ ಪರ್ಯಾಯಕ್ಕೆ ಪೂರ್ವಭಾವಿಯಾಗಿ ಕಳೆದ ಮೂರು ದಿನಗಳಿಂದ ವಿವಿಧ ಸಂಘಟನೆಗಳು ಹಾಗೂ ಗ್ರಾಮಗಳ ವತಿಯಿಂದ ನಡೆಯುತ್ತಿರುವ ಹಸಿರು ಹೊರೆ ಕಾಣಿಕೆಯಲ್ಲಿ ಇಂದು ಕರ್ನಾಟಕ ಬ್ಯಾಂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಇಂದು ಕರ್ನಾಟಕ ಬ್ಯಾಂಕ್ ಮಾತ್ರವಲ್ಲದೇ, ಪುತ್ತಿಗೆ ಮೂಲಮಠ, ಕಾರ್ಕಳ ತಾಲೂಕು, ಹೆಬ್ರಿ ತಾಲೂಕು, ಪೆರ್ಡೂರು ವಲಯ, ಆತ್ರಾಡಿ ವಲಯ, ಹಿರಿಯಡ್ಕ ವಲಯ, ಪರ್ಕಳ ವಲಯ, ಮಣಿಪಾಲದ ಗ್ರಾಮಸ್ಥರು, ಬಸ್ ಎಜೆಂಟ್ಗಳ ಸಂಘದ ವತಿಯಿಂದಲೂ ವಿವಿಧ ವಸ್ತುಗಳು, ತರಕಾರಿಯ ರೂಪದಲ್ಲಿ ಹಸಿರು ಹೊರೆ ಕಾಣಿಕೆಯನ್ನು ಮೆರವಣಿಗೆಯಲ್ಲಿ ತಂದು ಅರ್ಪಿಸಲಾಯಿತು.
ಮೆರವಣಿಗೆಯು ಜೋಡುಕಟ್ಟೆಯಿಂದ ಪ್ರಾರಂಭ ಗೊಂಡು ಡಯಾನ ವೃತ್ತದಿಂದ ಕೆ.ಎಂ.ಮಾರ್ಗ, ತ್ರಿವೇಣಿ ವೃತ್ತದ ಮೂಲಕ ಕನಕದಾಸ ರಸ್ತೆಯಲ್ಲಿ ಸಾಗಿ ರಥಬೀದಿ ಮೂಲಕ ಹೊರೆಕಾಣಿಕೆ ಉಗ್ರಾಣವಾಗಿರುವ ರಾಜಾಂಗಣ ಪಾರ್ಕಿಂಗ್ ಪ್ರದೇಶಕ್ಕೆ ತೆರಳಿತು. ಪುತ್ತಿಗೆ ಮಠದ ವತಿಯಿಂದ ಹೊರೆ ಕಾಣಿಕೆ ತಂದ ಪ್ರಮುಖರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.