ಎಟಿಎಂ ಕಾರ್ಡ್ ಬಳಸಿ ಹಣ ಕಳವು: ಇಬ್ಬರು ಅಂತರ್ ರಾಜ್ಯ ಆರೋಪಿಗಳ ಬಂಧನ

ಕುಂದಾಪುರ: ಎಟಿಎಂ ಕೇಂದ್ರದಿಂದ ಹಣ ತೆಗೆಯುಲು ಸಹಾಯ ಮಾಡುವ ನೆಪದಲ್ಲಿ ಗ್ರಾಹಕರ ಕಣ್ಣು ತಪ್ಪಿಸಿ ಅವರ ಎಟಿಎಂ ಕಾರ್ಡ್ ಬಳಸಿ ಹಣ ಎಗರಿಸಿದ ಮೂರು ಪ್ರತ್ಯೇಕ ಘಟನೆಗಳ ಇಬ್ಬರು ಹರಿಯಾಣ ಮೂಲದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮೂರು ಪ್ರಕರಣಗಳು ಬೈಂದೂರು ಠಾಣಾ ನಡೆದಿದ್ದು ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರ ತಂಡ ಹರಿಯಾಣ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹರಿಯಾಣ ರಾಜ್ಯ ಬರ್ಸಿ ಜಟಾನ್‌ನ ಸಂದೀಪ್ (36), ಹರಿಯಾಣ ಔರಂಗನಗರದ ರವಿ (27) ಬಂಧಿತ ಆರೋಪಿಗಳಾ ಗಿದ್ದು ಇವರಿಂದ 21 ಸಾವಿರ ನಗದು, 217 ಎಟಿಎಂ ಕಾರ್ಡ್, ಪಿಒಎಸ್ ಯಂತ್ರ, 2 ಮೊಬೈಲ್ ಹಾಗೂ ಒಂದು ಮೋಟಾರ್ ಸೈಕಲ್‌ನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಮೇಲೆ ವಿವಿಧ ರಾಜ್ಯಗಳಲ್ಲಿ 20ಕ್ಕೂ ಅಧಿಕ ಪ್ರಕರಣ ದಾಖಲಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇವರು ಬಹುತೇಕ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ತಾನ ಕಡೆಗಳಲ್ಲಿ ಇಂತಹ ಕುಕೃತ್ಯಗಳನ್ನು ಎಸಗಿದ್ದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ.

ಶಿರೂರು ಭಾಗದ ಎರಡು ಎಟಿಎಂ ಹಾಗೂ ಬೈಂದೂರಿನ ಒಂದು ಎಟಿಎಂ ಕೇಂದ್ರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ನೈಜ ಗ್ರಾಹಕರಿಗೆ ಹಣ ವಿಥ್‌ಡ್ರಾ ಮಾಡಲು ಸಹಕಾರ ಮಾಡುವ ನೆಪದಲ್ಲಿ ಬೇರೆ ಎಟಿಎಂ ಕಾರ್ಡ್ ನೀಡಿ ಮೂರು ಕಡೆ ಒಟ್ಟು 2 ಲಕ್ಷದ 26 ಸಾವಿರ ಹಣ ಎಗರಿಸಿದ್ದರು.

ಈ ಕುರಿತು ಮೂರು ಪ್ರತ್ಯೇಕ ಪ್ರಕರಣಗಳು ಬೈಂದೂರು ಠಾಣೆಯಲ್ಲಿ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಕುಂದಾಪುರದಲ್ಲಿ ಬುಧವಾರ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ.ಸಿದ್ದಲಿಂಗಪ್ಪ, ಪರಮೇಶ್ವರ ಹೆಗಡೆ, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ಬೈಂದೂರು ವೃತ್ತನಿರೀಕ್ಷಕ ಸವಿತ್ರ ತೇಜ್ ಸೂಚನೆಯಂತೆ, ಬೈಂದೂರು ಪೊಲೀಸ್ ಠಾಣೆ ಪಿಎಸ್‌ಐ ತಿಮ್ಮೇಶ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ಸುಜಿತ್ ಕುಮಾರ್, ಮಾಳಪ್ಪ, ಸೂರ ನಾಯ್ಕ್, ನಾಗಶ್ರೀ, ಶ್ರೀಧರ ಪಾಟೀಲ್ ಹಾಗೂ ಕುಂದಾಪುರ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳು ಸಹಕರಿಸಿದ್ದರು.

Leave a Reply

Your email address will not be published. Required fields are marked *

error: Content is protected !!