ತಮ್ಮ ವೈಫಲ್ಯವನ್ನು ಮರೆಮಾಚಲು ಭ್ರಷ್ಟಾಚಾರದ ನೆಪದಲ್ಲಿ ನಗರಸಭೆಗೆ ಮುತ್ತಿಗೆ- ಕಾಂಚನ್

ಉಡುಪಿ: ತಮ್ಮದೇ ಆಡಳಿತವಿರುವ ಉಡುಪಿ ನಗರಸಭೆಯ ವಿರುದ್ದ ಮುತ್ತಿಗೆ ಹಾಕಲು ಹೊರಟಿರುವ ನಗರ ಬಿಜೆಪಿ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರ ವರ್ತನೆ ನಿಜಕ್ಕೂ ಹಾಸ್ಯಾಸ್ಪದವಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ಉಡುಪಿ ನಗರಸಭೆಯ ವಿಪಕ್ಷ ನಾಯಕರಾದ ರಮೇಶ್ ಕಾಂಚನ್ ವ್ಯಂಗ್ಯವಾಡಿದ್ದಾರೆ.

35 ನಗರಸಭಾ ವಾರ್ಡ್‌ಗಳಿರುವ ಉಡುಪಿ ನಗರಸಭೆಯಲ್ಲಿ 32 ಮಂದಿ ಬಿಜೆಪಿ ಸದಸ್ಯರನ್ನು ಹೊಂದಿದ್ದು ಪ್ರತಿ ತಿಂಗಳಿಗೊಮ್ಮೆ ಆಡಳಿತ ಪಕ್ಷದ ಸದಸ್ಯರನ್ನು ಸೇರಿಸಿ ಅಧಿಕಾರಿಗಳೊಂದಿಗೆ ಶಾಸಕರು ಸಭೆ ನಡೆಸುತ್ತಿದ್ದರೂ ಕೂಡ ಅದೇ ಅಧಿಕಾರಿಗಳು ಭ್ರಷ್ಠಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿಕೊಂಡು ಪ್ರತಿಭಟಿಸಲು ಹೊರಟಿರುವುದು ನಿಜಕ್ಕೂ ಹಾಸ್ಯಾಸ್ಪದ.

ಉಡುಪಿ ನಗರಕ್ಕೆ ಉತ್ತಮ ಆಡಳಿತ ಕೊಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ ತನ್ನ ಅವಧಿಯಲ್ಲೇ ವ್ಯಾಪಕ ಭ್ರಷ್ಠಾಚಾರ ನಡೆಸಿದ್ದು ಅದನ್ನು ಈಗಿನ ಕಾಂಗ್ರೆಸ್ ಆಡಳಿತದ ರಾಜ್ಯ ಸರಕಾರದ ತಲೆಗೆ ಕಟ್ಟುವ ಕೆಲಸ ನಡೆಸುತ್ತಿದೆ. ಕುಡಿಯುವ ನೀರಿನ ವಿಪರೀತ ಬೆಲೆ ಏರಿಕೆ, ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರ ಇವರ ಆಡಳಿತದಲ್ಲಿ ನಡೆದಿದೆ ಎಂದು ಉಡುಪಿಯ ನಾಗರಿಕರಿಗೆ ಸ್ಪಷ್ಠವಾಗಿ ತಿಳಿದಿದೆ.

ಕುಡಿಯುವ ನೀರಿನ ಬೆಲೆ ಏರಿಕೆ ಮಾಡಿರುವುದು ಇವರ ನಗರಸಭೆಯ ಆಡಳಿತವಧಿಯಲ್ಲಿ. ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ನಗರಸಭೆಯ ಅಧಿಕಾರಿಗಳು ಮಾಡುತ್ತಿದ್ದಾರೆ. ನೀರಿನ ಬೆಲೆ ಏರಿಕೆ ಆಗಿದ್ದು ನಿಜಕ್ಕೂ ಖಂಡನೀಯ. ಈ ವಿಷಯ ತಿಳಿದ ನಂತರ ಉಡುಪಿಯ ಶಾಸಕರು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀರಿನ ಬೆಲೆ ಏರಿಕೆಯ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಉಡುಪಿಯ ಜಿಲ್ಲಾಧಿಕಾರಿ ಹಾಗೂ ಉಡುಪಿ ನಗರಸಭೆಯ ಪೌರಾಯುಕ್ತರು ಶುದ್ಧಹಸ್ತರಾಗಿದ್ದು, ಜನಪರವಾದ ಉತ್ತಮ ಆಡಳಿತ ನೀಡಿದ್ದಾರೆ. ಆದರೆ ಇವರ ವೈಫಲ್ಯವನ್ನು ಮರೆಮಾಚಲು ಭ್ರಷ್ಟಾಚಾರದ ನೆಪವನ್ನಿಟ್ಟುಕೊಂಡು ಪ್ರತಿಭಟನೆ ಮಾಡುವ ಮೂಲಕ ಅಧಿಕಾರಿಗಳನ್ನು ಹೆದರಿಸಿ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಬಿಜೆಪಿಗರ ಪ್ರಯತ್ನವಾಗಿದೆ. ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯುವಾಗದೇ ನಗರಸಭೆಯ ಆಡಳಿತ ವೈಫಲ್ಯವನ್ನು ಮರೆಮಾಚಲು ಈ ಪ್ರತಿಭಟನೆಯ ಉದ್ದೇಶವಾಗಿದೆ.

ಮೊದಲು ಜನರಿಗೆ ನೀಡಿದ ಮಾತಿನಂತೆ ಉತ್ತಮ ಆಡಳಿತ ನೀಡಿ ಹಾಗೂ ರಾಜ್ಯ ಸರ್ಕಾರದ ಜೊತೆ ಉತ್ತಮ ಭಾಂದವ್ಯವನ್ನು ಹೊಂದಿ ಉಡುಪಿಯ ಅಭಿವೃದ್ಧಿಗೆ ಕೈಜೋಡಿಸಿ ಹಾಗೂ ಜನಪರವಾಗಿರಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಾಗೂ ಉಡುಪಿ ನಗರಸಭೆಯ ವಿಪಕ್ಷ ನಾಯಕರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!