ಎಲ್ಲಾ ಫ್ರೀ ಕೊಟ್ಟು ಅಭಿವೃದ್ಧಿ ಮಾಡಲು ಸರಕಾರದ ಬಳಿ ದುಡ್ಡಿಲ್ಲ – ಆರ್.ಅಶೋಕ್

ಉಡುಪಿ: ರಾಜ್ಯ ಸರಕಾರ ಹಿಂದುಗಳ ಮೇಲೆ ಧಮನಕಾರಿ ಅಸ್ತ್ರವನ್ನು ಪ್ರಯೋಗ ಮಾಡುತ್ತಿದೆ. ಅಯೋಧ್ಯೆಯ ಬಗ್ಗೆ ಸಿದ್ದರಾಮಯ್ಯರಿಗೆ ದ್ವೇಷ ಮತ್ತು ವೈರತ್ವ ಇದೆ. ಅಲ್ಪಸಂಖ್ಯಾತ ಮತ ಕ್ರೋಡೀಕರಿಸಿ ಚುನಾವಣೆಗೆ ಸಿದ್ಧತೆ ಮಾಡುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿ ಆಯೆಯಾಗಿರುವ ಆರ್.ಅಶೋಕ್ ಆರೋಪಿಸಿದ್ದಾರೆ.

ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿದ ಅಶೋಕ್, ಪಕ್ಷದ ಕಚೇರಿಯ ಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ, ಅವರ ಕಾಲೋನಿಗೆ 1ಸಾವಿರ ಕೋಟಿ ನೀಡುವ ಸಿದ್ದರಾಮಯ್ಯ, ರಾಮಮಂದಿರಕ್ಕೆ ನಾನು ಹೋಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.

ರಾಮ ಮಂದಿರ ವಿಚಾರದಲ್ಲಿ ಇರುವವರಿಗೆ ತೊಂದರೆ ಕೊಡುವುದು ಸಿದ್ದರಾಮಯ್ಯನವರ ಚಾಳಿ. ಅಮಾಯಕ ಆಟೋ ಚಾಲಕನ ಕೇಸುಗಳು ವಜಾ ಆಗಿದೆ. ಕರಸೇವೆ ಮಾಡಿದ ನಂತರ ಆತನ ಮೇಲಿನ ಎಲ್ಲಾ ಕೇಸುಗಳನ್ನು ಹಾಕಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ದ್ವೇಷಪೂರಿತ ರಾಜಕಾರಣ ಮಾಡಲಾಗುತ್ತಿದೆ ಎಂದವರು ದೂರಿದರು.

ಎರಡು ಬಣ ಸ್ಪಷ್ಟ: ರಾಜ್ಯ ಸರಕಾರ ಸಿದ್ದರಾಮಯ್ಯ ಬಣ- ಡಿಕೆಶಿ ಬಣ ಎಂದು ವಿಭಜನೆಗೊಂಡಿದೆ. ಅವರಿಬ್ಬರೂ ಜಗಳದ ಹಾದಿ ಹಿಡಿದಾಗಿದೆ. ಮೂರು ಡಿಸಿಎಂ ಕೇಳುತ್ತಿರುವುದು ಸಿದ್ದರಾಮಯ್ಯ ಚಿತಾವಣೆಯ ಪ್ರಯೋಗ. ಡಿ.ಕೆ ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಡಿಸಿಎಂ ಅಸ್ತ್ರ ಪ್ರಯೋಗ. ಸಿದ್ದರಾಮಯ್ಯರ ಸೂಚನಯಲ್ಲೇ ಪ್ರತ್ಯೇಕ ಸಭೆಗಳು ನಡೆಯುತ್ತಿದೆ. ಡಿಕೆಶಿಗೆ ಪ್ರಕರಣಗಳಲ್ಲಿ ಯಾವುದಾದರೂ ಸಮಸ್ಯೆ ಆದರೆ ನೇರವಾಗಿ ಕಾಂಗ್ರೆಸ್ ಕಾರಣ. ಡಿಕೆಶಿಗೆ ಯಾವುದೇ ಕಂಟಕ ಇದ್ದರೂ ಅದು ಸಿದ್ದರಾಮಯ್ಯನಿಂದ ಎಂದರು.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಎಲ್ಲೆಲ್ಲಿ ಚಿತ್ತಾವಣೆ ಮಾಡುತ್ತಿದ್ದಾರೆ, ಏನೆಲ್ಲ ಚಿತ್ತಾವಣೆ ಮಾಡುತ್ತಿದ್ದಾರೆ ಎಂಬುದೇ ಗೊತ್ತಾ ಗುತ್ತಿಲ್ಲ. ಒಪ್ಪಂದ ಪ್ರಕಾರ ಎರಡುವರೆ ಎರಡುವರೆ ವರ್ಷ ಎಂದು ನಿರ್ಧಾರ ಆಗಿದೆ. ಈ ಬಗ್ಗೆ ನಾನು ವಿಧಾನಸಭೆಯಲ್ಲೇ ಡಿ.ಕೆ ಶಿವಕುಮಾರ್ ಗೆ ಕೇಳಿದ್ದೇನೆ ಎಂದು ಹೇಳಿದರು.

ಸೋಮಣ್ಣ ಪಕ್ಷ ಬಿಡಲ್ಲ: ಪಷದ ನಾಯ ಸೋಮಣ್ಣ ಅವರ ವಿವಾದದ ಬಗ್ಗೆ ಮಾತನಾಡಿದ ಅಶೋಕ್, ಇವತ್ತು ಕೂಡ ಸೋಮಣ್ಣ ಜೊತೆ ಮಾತನಾಡಿದ್ದೇನೆ. ನೂರಕ್ಕೆ ನೂರು ಯಾವ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಬೇರೆ ಯಾವ ಪಕ್ಷಕ್ಕೂ ಸೋಮಣ್ಣ ಹೋಗಲ್ಲ. ಸೋಮಣ್ಣ ಬಿಜೆಪಿಯಲ್ಲಿ ಉಳಿಯುತ್ತಾರೆ. ಅವರ ಕೆಲವೊಂದು ವಿಚಾರಗಳಿವೆ, ನನ್ನ ಜೊತೆ ನಾಲ್ಕೈದು ದಿನದ ಹಿಂದೆಯೂ ಮಾತನಾಡಿದ್ದಾರೆ. ಸೋಮಣ್ಣಗೆ ಇರುವ ಸಮಸ್ಯೆಗಳ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಸೂಕ್ತ ಪರಿಹಾರ ಕಂಡುಕೊಂಡು ಜೊತೆಯಾಗಿ ಹೋಗುತ್ತೇವೆ ಎಂದರು.

ದೇವೇಗೌಡರು ಕೂಡ ಈಗ ಎನ್‌ಡಿಎ ಪಾರ್ಟನರ್. ಅವರು ಕೂಡ ಮೋದಿ ಪ್ರಧಾನಮಂತ್ರಿಯಾಗಲಿ ಎಂದು ಬಯಸಿದ್ದಾರೆ. ಭಿನ್ನಾಭಿಪ್ರಾಯಗಳ ಶಮನಕ್ಕೆ ಅವರು ಕೂಡ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಯತ್ನಾಳ್ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ತರದ ಬೆಳವಣಿಗೆಗಳು ಸರ್ವೇಸಾಮಾನ್ಯ. ಎಲ್ಲವೂ ಸರಿ ಹೋಗುತ್ತದೆ. ರಾಜ್ಯದಲ್ಲಿ 25 ಸ್ಥಾನಗಳ ನ್ನು ಗೆಲ್ಲುವತ್ತ ಎಲ್ಲರ ದೃಷ್ಟಿ ಇದೆ. ಎಲ್ಲಾ ತ್ಯಾಗಕ್ಕೂ ಪಕ್ಷದ ಕಾರ್ಯಕರ್ತರು ಮುಖಂಡರು ಸಿದ್ಧರಿದ್ದಾರೆ. ಮೋದಿ ಪ್ರಧಾನಿ ಆದರೆ ದೇಶಕ್ಕೆ ಒಳಿತು ಎಂದರು.

ಚುನಾವಣೆ ಬಳಿಕ ಕಾಂಗ್ರೆಸ್ ಸರಕಾರ ಪತನಗೊಳ್ಳುವ ವಿಚಾರ ಕುರಿತಂತೆ ಮಾತನಾಡಿದ ಅಶೋಕ್, ಎಲ್ಲಾ ಜ್ಯೋತಿಷಿಗಳು ಕಾಂಗ್ರೆಸ್ ಸರ್ಕಾರ ಪತನ ಆಗುತ್ತೆ ಎಂದು ಹೇಳಿದ್ದಾರೆ. ಸರಕಾರದಲ್ಲಿ ಒಡಕು, ಇಬ್ಬಾಗ ಎಂದು ಹೇಳಿದ್ದಾರೆ. ಎಲ್ಲಾ ಫ್ರೀ ಕೊಟ್ಟು ಅಭಿವೃದ್ಧಿ ಮಾಡಲು ಸರಕಾರದ ಬಳಿ ದುಡ್ಡಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಸಂಸತ್ ಟಿಕೇಟ್ ಯಾರಿಗೆ ನೀಡಬೇಕು ಎಂಬ ಬಗ್ಗೆ ಪಕ್ಷ ಸರ್ವೆ ಮಾಡುತ್ತಿದೆ. ಜನರ ಹತ್ತಿರ ಇರುವವರು ಆಯ್ಕೆಯಾಗುತ್ತಾರೆ. ಕೇಂದ್ರದ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಜೆಡಿಎಸ್‌ಗೆ ಯಾವ ಸೀಟು ಬಿಟ್ಟು ಕೊಡಬೇಕು ಎಂಬ ಬಗ್ಗೆ ನಿರ್ಧಾರವಾಗುತ್ತದೆ. ದೇವೇಗೌಡರು ಮತ್ತು ಕುಮಾರಸ್ವಾಮಿಯ ಜೊತೆ ಕೇಂದ್ರ ನಾಯಕರು ಮಾತನಾಡುತ್ತಾರೆ ಎಂದರು.

ಸೀಟು ಹಂಚಿಕೆ ಬಗ್ಗೆ ಇವರೆಗೆ ಯಾವುದೇ ಚರ್ಚೆ ಆಗಿಲ್ಲ. ಕೆಟ್ಟ ದುರಹಂಕಾರಿ, ದ್ವೇಶದ ರಾಜಕಾರಣ ಮಾಡುವ ರಾಜ್ಯ ಸರ್ಕಾರ ಹೋಗಬೇಕು ಎಂದು ದೇವೇಗೌಡರು ಹೇಳಿದ್ದಾರೆ. ಈಗ ಚುನಾವಣೆ ಯಾದರೆ ಬಿಜೆಪಿ 130 ಸ್ಥಾನ ಗೆಲ್ಲುತ್ತೆ ಎಂದು ಅಶೋಕ ನುಡಿದರು.

ದೇವೇಗೌಡರು ಜಾತ್ಯತೀತವಾಗಿದ್ದರೆ ಸಿದ್ದರಾಮಯ್ಯ ಅವರನ್ನು ಬಿಟ್ಟು ಬರಲು ಕಾರಣವೇನು ಎಂದು ಪ್ರಶ್ನಿಸಿದ ಅಶೋಕ್, ಮೋಸ ಮಾಡಲು ಅಧಿಕಾರದ ದುರಾಸೆಯಿಂದ ಕಾಂಗ್ರೆಸ್ ಸೇರಿದ್ರಾ? ದೇವೇಗೌಡರಂತ ಹಿರಿಯರು ರಾಮಮಂದಿರ, ಮೋದಿ ವಿಚಾರಕ್ಕೆ ಬೆಂಬಲ ನೀಡಿದ್ದಾರೆ. ದೇಶದ, ರಾಜ್ಯದ ಭಾವನೆ ನರೇಂದ್ರ ಮೋದಿ ಕಡೆ ಇದೆ. ಬಿಜೆಪಿ/ಜೆಡಿಎಸ್ 28 ಸೀಟು ಗೆಲ್ಲುವ ಸ್ಥಿತಿಗೆ ಬಂದಿದೆ ಎಂದವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!