ಬೆಳಪು ಗ್ರಾಪಂ ವ್ಯಾಪ್ತಿಯಲ್ಲಿ ಅದಾನಿ ಸಂಸ್ಥೆಯ ಕಾಮಗಾರಿಗೆ ಚಾಲನೆ
ಉಡುಪಿ, ಜ.7: ಕಾಪು ತಾಲೂಕಿನ ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅದಾನಿ ಸಂಸ್ಥೆಯ ಸಿಎಸ್ಆರ್ ಯೋಜನೆ ಯಡಿಯಲ್ಲಿ ಕೊರಗ ಸಮುದಾಯದ ಶ್ರೀಬ್ರಹ್ಮ ಗುಡಿಯ ಆವರಣಕ್ಕೆ ಕಾಂಪೌಂಡ್ ಗೋಡೆ ಸಹಿತ ಎರಡು ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಲಾಯಿತು.
ಬೆಳಪು ಗ್ರಾಪಂ ವ್ಯಾಪ್ತಿಯಲ್ಲಿ ಮೂಲಭೂತಸೌಕರ್ಯ ಅಭಿವೃದ್ಧಿಗಾಗಿ ಒಟ್ಟು 15 ಲಕ್ಷ ರೂ.ವೆಚ್ಚದ ಕಾಮಗಾರಿಗಳಿಗೆ ಹಸಿರು ನಿಶಾನೆ ತೋರಲಾಗಿದೆ. ಶ್ರೀಧರ್ಮ ಜಾರಂದಾಯ ದೈವಸ್ಥಾನದ ಬಳಿ ಇರುವ ಜಾರಂದಾಯ ಕೆರೆಯ ಅಭಿವೃದ್ಧಿ, ಪಣಿಯೂರು ಗ್ರಾಮದಲ್ಲಿ ನಾಲಾಗೆ ತಡೆಗೋಡೆ ಹಾಗೂ ಕೊರಗ ಸಮುದಾಯದ ಶ್ರೀ ಬ್ರಹ್ಮ ಗುಡಿಯ ಆವರಣಕ್ಕೆ ಆವರಣ ಗೋಡೆಯ ಕಾಮಗಾರಿಗಳಿಗೆ ಅದಾನಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಮತ್ತು ಬೆಳಪು ಗ್ರಾಪಂ ಅಧ್ಯಕ್ಷರಾದ ಬೆಳಪು ದೇವಿಪ್ರಸಾದ್ ಶೆಟ್ಟಿ ಭೂಮಿಪೂಜೆ ನೆರವೇರಿಸುವುದರ ಮೂಲಕ ಹಸಿರು ನಿಶಾನೆ ತೋರಿಸಿದರು.
ಈ ಸಂದರ್ಭ ಮಾತನಾಡಿದ ಅದಾನಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ, ಸಂಸ್ಥೆಯು ತನ್ನ ಸಿಎಸ್ಆರ್ ಯೋಜನೆಯಡಿ ಉಡುಪಿ ಉಷ್ಣ ವಿದ್ಯುತ್ ಸ್ಥಾವರದ ನೆರೆ ಗ್ರಾಮಗಳಲ್ಲಿ ಹತ್ತು ಹಲವಾರು ಕಾರ್ಯಕ್ರಮ ಗಳನ್ನು ರೂಪಿಸಿದೆ. ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯದ ಅಭಿವೃದ್ಧಿ, ಗ್ರಾಮೀಣ ಕ್ರೀಡೆ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡುವ ಕೆಲಸ ಗಳನ್ನು ಅನುಷ್ಟಾನಗೊಳಿಸಿದೆ ಎಂದರು.
ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು 23 ಕೋಟಿ ರೂ. ಅನುದಾನವನ್ನು ಅದಾನಿ ಸಂಸ್ಥೆ ಈ ಹಿಂದೆ ಘೋಷಿಸಿದ್ದು, ಅದರಡಿಯಲ್ಲಿ ಇಲ್ಲಿಯ ತನಕ ಸುಮಾರು 13 ಕೋಟಿ ರೂ.ಗಳಷ್ಟು ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ ಎಂದರು.
ಬೆಳಪು ಗ್ರಾಪಂ ವ್ಯಾಪ್ತಿಯಲ್ಲಿ ಆರೋಗ್ಯ, ಶಿಕ್ಷಣದ ಯೋಜನೆಯನ್ನು ಹೊರತುಪಡಿಸಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಅದಾನಿ ಘೋಷಿಸಿದ್ದು, ಇಲ್ಲಿಯವರೆಗೆ ಸುಮಾರು 1.75 ಕೋಟಿ ರೂ. ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಿದೆ ಎಂದು ಕಿಶೋರ ಆಳ್ವ ಹೇಳಿದರು.
ಬೆಳಪು ಗ್ರಾಪಂ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ ಅದಾನಿ ಸಿಎಸ್ಆರ್ ಯೋಜನೆಯಡಿ ಹಲವಾರು ಸವಲತ್ತುಗಳನ್ನು ಗ್ರಾಮಸ್ಥರಿಗೆ ತಲುಪಿಸುತ್ತಿರುವುದು ಸ್ವಾಗತಾರ್ಹ ಎಂದರು.
ಬೆಳಪು ಗ್ರಾಪಂ ಸದಸ್ಯರಾದ ಶರತ್ ಕುಮಾರ್, ಪ್ರಕಾಶ್ ಭಟ್, ಸುಲೈಮಾನ್, ಪಿಡಿಓ ಪ್ರವೀಣ್ ಡಿ’ ಸೋಜ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.