ಅಯೋಧ್ಯೆ ಶ್ರೀರಾಮ ಮಂದಿರದ ವಿರುದ್ಧ ಕಾಂಗ್ರೆಸ್ ನಾಯಕರ ವರ್ತನೆ ಕಾಂಗ್ರೆಸ್ಸನ್ನು ಪ್ರಪಾತಕ್ಕೆ ತಳ್ಳಲಿದೆ: ಕುಯಿಲಾಡಿ
ಉಡುಪಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಗೊಂಡು ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ವಿಚಲಿತಗೊಂಡಿರುವ ಕಾಂಗ್ರೆಸ್ ನಾಯಕರ ಶ್ರೀ ರಾಮ ಮಂದಿರ ವಿರೋಧಿ ವರ್ತನೆ ಕಾಂಗ್ರೆಸ್ಸನ್ನು ಪ್ರಪಾತಕ್ಕೆ ತಳ್ಳಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಹಿಂದುತ್ವದ ವಿರುದ್ಧ ಸದಾ ಕೆಂಡ ಕಾರುವ ಕಾಂಗ್ರೆಸ್ಸಿನ ವಿವಾದಿತ ನಾಯಕ ಬಿ.ಕೆ. ಹರಿಪ್ರಸಾದ್ ಮೂಲೆಗುಂಪಾಗುವ ಭಯದಿಂದ ಆಗಾಗ ತನ್ನ ಹರಕು ನಾಲಿಗೆಯ ಪ್ರದರ್ಶನವನ್ನು ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಆದರೆ ಈ ಬಾರಿ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಉದ್ದೇಶಿಸಿ, ಕರ್ನಾಟಕದಲ್ಲೂ ಗೋದ್ರಾ ಮಾದರಿಯ ಗಲಭೆ ನಡೆಯುವ ಸಾಧ್ಯತೆ ಇದೆ ಎಂದಿರುವುದು ಸ್ವತಃ ರಾಜ್ಯ ಕಾಂಗ್ರೆಸ್ ಸರಕಾರವನ್ನು ಪೇಚಿಗೆ ಸಿಲುಕಿಸಿದೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ಬಿ.ಕೆ. ಹರಿಪ್ರಸಾದ್ ಅವರನ್ನು ಕೂಡಲೇ ಉನ್ನತ ತನಿಖೆಗೆ ಒಳಪಡಿಸಿ ವಿರೋಧಿಗಳ ಹುನ್ನಾರದ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವುದು ಸಿ.ಎಂ. ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರದ ಹೊಣೆಯಾಗಿದೆ. ಈ ಕುರಿತು ಕೇಂದ್ರ ಸರಕಾರವೂ ಮಧ್ಯಪ್ರವೇಶಿಸಿ ಎನ್ಐಎ ಮೂಲಕ ಹರಿಪ್ರಸಾದ್ ರವರ ತೀವ್ರ ವಿಚಾರಣೆ ನಡೆಸುವುದು ಅವಶ್ಯಕವಾಗಿದೆ.
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗುವುದನ್ನು ಸಹಿಸದೆ ಬಹಳಷ್ಟು ಹೋರಾಡಿ ವೈಫಲ್ಯದಿಂದ ಕಂಗೆಟ್ಟಿರುವ ಕಾಂಗ್ರೆಸ್ ಇಂದು ಹಿಂದೂ ಸಮಾಜದ ಶ್ರದ್ಧಾ ಕೇಂದ್ರ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಅಸಹನೆ ಮತ್ತು ದ್ವೇಷದಿಂದ ಉದ್ದೇಶಪೂರ್ವಕವಾಗಿ ರಾಮಭಕ್ತ ಕರಸೇವಕರನ್ನು ಬಂಧಿಸುವ ಮೂಲಕ ತೀವ್ರ ಹಿಂದೂ ವಿರೋಧಿ ನೀತಿಯನ್ನು ಪ್ರದರ್ಶಿಸುತ್ತಿರುವುದು ಖಂಡನೀಯ.
ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿಯ ವರನ್ನು 32 ವರ್ಷಗಳ ಹಿಂದಿನ ಪ್ರಕರಣದ ನೆಪದಲ್ಲಿ ಬಂಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದೂ ವಿರೋಧಿ ನೀತಿ ಹಾಗೂ ಒಂದೇ ಕೋಮಿನ ಓಲೈಕೆಯೇ ಕಾರಣ ಎಂಬುದು ಅವರ ಗೊಂದಲದ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ. ಶ್ರೀಕಾಂತ್ ಪೂಜಾರಿಯವರ ಮೇಲೆ 16 ಪ್ರಕರಣಗಳು ಬಾಕಿ ಇವೆ ಎಂದು ಡಂಗುರ ಸಾರಿದ್ದ ಸಿ.ಎಂ. ಸಿದ್ದರಾಮಯ್ಯ, ವಾಸ್ತವಿಕವಾಗಿ ಪೋಲಿಸ್ ದಾಖಲೆಯ ಪ್ರಕಾರ ಕೇವಲ 1 ಪ್ರಕರಣ ಮಾತ್ರ ಬಾಕಿ ಇರುವುದನ್ನು ಅರಿತು ತೀವ್ರ ಮುಖಭಂಗಕ್ಕೊಳಗಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಸರಿಯಾದ ಮಾಹಿತಿಯನ್ನು ಪಡೆಯದೆ ತರಾತುರಿಯಲ್ಲಿ ಹಿಂದೂ ಕಾರ್ಯಕರ್ತರನ್ನು ಧಮನಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಸಿ.ಎಂ. ಸಿದ್ದರಾಮಯ್ಯನವರಿಂದ ಹಿಂದೂ ವಿರೋಧಿ ನೀತಿಯನ್ನು ಬಳುವಳಿ ಪಡೆದುಕೊಂಡಿರುವ ಯತೀಂದ್ರ ಸಿದ್ದರಾಮಯ್ಯ ಭಾರತ ಹಿಂದೂ ರಾಷ್ಟ್ರವಾದರೆ ಪಾಕಿಸ್ತಾನದಂತೆ ದಿವಾಳಿಯಾಗುತ್ತದೆ ಎಂದಿರುವುದು ಹಾಸ್ಯಾಸ್ಪದವಾಗಿದೆ. ಭಾರತ ಎಲ್ಲಾ ಜಾತಿ-ಧರ್ಮಗಳನ್ನು ಒಳಗೊಂಡಿರುವ ಸನಾತನ ಸಂಸ್ಕೃತಿಯ ಅನೇಕತೆಯಲ್ಲಿ ಏಕತೆಯನ್ನು ಹೊಂದಿರುವ ಬಲಿಷ್ಠ ಹಿಂದೂ ರಾಷ್ಟ್ರ ಎಂಬುದನ್ನು ಕೇವಲ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಲ್ಲಿ ರುವ ಯತೀಂದ್ರ ಸಿದ್ದರಾಮಯ್ಯ ಅವರು ಮನದಟ್ಟುಮಾಡಿಕೊಳ್ಳುವುದು ಉತ್ತಮ.
ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10 ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಬೊಬ್ಬಿರಿದ ಸಿ.ಎಂ. ಸಿದ್ದರಾಮಯ್ಯನವರು ಬರ ಪರಿಹಾರಕ್ಕೆ ಹಾಗೂ ರಾಜ್ಯದ ಅಭಿವೃದ್ಧಿಗೆ ಚಿಕ್ಕಾಸನ್ನೂ ಬಿಡುಗಡೆ ಮಾಡದಿರುವುದು ಶೋಚನೀಯ. ದೇಶದ್ರೋಹಿ ಪಿಎಫ್ಐ ಮತಾಂಧ ಸಂಘಟನೆಯ ಸದಸ್ಯರ ನೂರಾರು ಪ್ರಕರಣಗಳನ್ನು ಹಿಂಪಡೆದಿರುವ ಜೊತೆಗೆ ಕೆಜೆ ಹಳ್ಳಿ ಡಿಜೆ ಹಳ್ಳಿ ಗಲಭೆಯ ಆರೋಪಿಗಳ ಬಗ್ಗೆ ದಿವ್ಯ ಮೌನ ವಹಿಸಿರುವ ಸಿದ್ದರಾಮಯ್ಯ ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆಯ ಸಂದರ್ಭದಲ್ಲೇ ಕರಸೇವಕರನ್ನು ಬಂಧಿಸುವ ಕುತಂತ್ರಕ್ಕೆ ಮುಂದಾಗಿರುವುದು ಕಾಂಗ್ರೆಸ್ಸಿನ ಹಿಂದೂ ದ್ವೇಷಿ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹಿಂದೂ ಸಮಾಜ ಇಂತಹ ಗೊಡ್ಡು ಬೆದರಿಕೆಗಳಿಗೆ ಎಂದೂ ಮಣಿಯಲಾರದು. ದೇಶದೆಲ್ಲೆಡೆ ತಿರಸ್ಕೃತಗೊಂಡಿರುವ ಕಾಂಗ್ರೆಸ್ ಅಧಿಕಾರ ಶಾಶ್ವತ ಅಲ್ಲ ಎಂಬುದನ್ನು ಮರೆತಂತಿದೆ. ರಾಜ್ಯದ ಜನತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿನ ಹಿಂದೂ ಧಮನ ನೀತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ತಕ್ಕ ಶಾಸ್ತಿಯನ್ನು ಮಾಡಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.