ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ- ಪ್ರಭಾಕರ್ ಭಟ್ ಕೇಸ್‌ಗೆ ಮರುಜೀವ

ಬೆಂಗಳೂರು: ಶ್ರೀರಂಗಪಟ್ಟಣದಲ್ಲಿ ಮಹಿಳಾ ವಿರೋಧಿ ದ್ವೇಷ ಭಾಷಣ ಮಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ಪ್ರಕರಣ ಮರುಜೀವ ಪಡೆದಿದೆ.

ಬುಧವಾರ ಶ್ರೀರಂಗಪಟ್ಟಣ ನ್ಯಾಯಾಲಯಕ್ಕೆ ಹಿರಿಯ ವಕೀಲ ಎಸ್ ಬಾಲನ್ ಅವರು CR.P.C SECTION 301, 302 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಪ್ರಿಂ ಕೋರ್ಟ್ ನ ಹಲವು ತೀರ್ಪುಗಳನ್ನು ಉಲ್ಲೇಖಿಸಿ ಶ್ರೀರಂಗಪಟ್ಟಣ ನ್ಯಾಯಾಲಯದಲ್ಲಿ ವಕೀಲ ಎಸ್ ಬಾಲನ್ ಅವರು ದೂರುದಾರರ ಪರವಾಗಿ ವಕಾಲತ್ತು ಹಾಕಿದ್ದಾರೆ.

“ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬರು ಗಂಡಂದಿರು” ಎಂದು ಭಾಷಣ ಮಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್, ಮುಂದುವರೆದು ಹಿಂದೂ ಮುಸ್ಲಿಂ ಧರ್ಮಗಳನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಝೀರ್ ಚಿಕ್ಕನೇರಳೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಭಟ್ ಬಂಧನಕ್ಕೆ ಒತ್ತಡಗಳು ಹೆಚ್ಚುತ್ತಿದ್ದಾಗಲೇ ಶ್ರೀರಂಗಪಟ್ಟಣ ನ್ಯಾಯಾಲಯ ಭಟ್ ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು.

2023 ರ ಡಿಸೆಂಬರ್ 28 ರಂದು ಕಲ್ಲಡ್ಕ ಪ್ರಭಾಕರ ಭಟ್, ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರಿ ವಕೀಲರು ವಿಸ್ತೃತ ಆಕ್ಷೇಪಣೆ ಸಲ್ಲಿಸಲು ಸಮಯ ಕೇಳದೇ ಮೌಖಿಕವಾಗಿ ಆಕ್ಷೇಪಣೆಯನ್ನು ಅಂದೇ ಸಲ್ಲಿಸಿದ್ದರಿಂದ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ಮೂಲ ಅರ್ಜಿಯ ವಿಚಾರಣೆಯನ್ನು 2024 ರ ಜನವರಿ 03ಕ್ಕೆ ಮುಂದೂಡಿತ್ತು. ಇಂದು ಅರ್ಜಿದಾರರ ಪರವಾಗಿ ಖ್ಯಾತ ಜನಪರ ವಕೀಲ ಎಸ್. ಬಾಲನ್ ಮತ್ತು ಮಂಡ್ಯದ ಜನಪರ ವಕೀಲ ಲಕ್ಷ್ಮಣ ಚೀರನಹಳ್ಳಿ ವಕಾಲತ್ತು ಸಲ್ಲಿಸಿದ್ದಾರೆ. ನ್ಯಾಯಾಲಯವು ವಿಚಾರಣೆಯನ್ನು ಜನವರಿ 05 ಕ್ಕೆ ಮುಂದೂಡಿದೆ.”

Leave a Reply

Your email address will not be published. Required fields are marked *

error: Content is protected !!