ಅನ್ನಭಾಗ್ಯದ ಅಕ್ಕಿ ಕದ್ದು ಬಡವರಿಗೆ ‘ನಾ ಖಾನೆದುಂಗಾ’ ಎನ್ನುತ್ತಿದೆಯೇ ಬಿಜೆಪಿ?- ಕಾಂಗ್ರೆಸ್

ಬೆಂಗಳೂರು: ‘ನಾ ಖವುಂಗಾ, ನಾ ಖಾನೆದುಂಗಾ’ ಎನ್ನುವ ಘೋಷವಾಕ್ಯದ ನೈಜ ಅರ್ಥ ಈಗ ಹೊರಬರುತ್ತಿದೆ. ಅನ್ನಭಾಗ್ಯದ ಅಕ್ಕಿ ಕದ್ದು ಬಡವರಿಗೆ ‘ನಾ ಖಾನೆದುಂಗಾ’ ಎನ್ನುತ್ತಿದೆಯೇ ಬಿಜೆಪಿ?’ ಎಂದು ಕಾಂಗ್ರೆಸ್, ಸಂಸದ ಪ್ರತಾಪ್ ಸಿಂಹ ಸಹೋದರನ ಬಂಧನ ಹಾಗೂ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರನ ರೈಸ್ ಮಿಲ್ ಜಪ್ತಿ ಪ್ರಕರಣ ಉಲ್ಲೇಖಿಸಿ ವಾಗ್ದಾಳಿ ನಡೆಸಿದೆ.

ರವಿವಾರ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಬಿಜೆಪಿ ನಾಯಕರು ತಮ್ಮ ಅಣ್ಣ-ತಮ್ಮಂದಿರಿಗೆ ತಿನ್ನಿಸಲು ಹೊರಟಿರುವುದು ಪ್ರತಾಪ್ ಸಿಂಹ ಹಾಗೂ ಮಣಿಕಂಠ ರಾಥೋಡ್ ಸಹೋದರರ ಕಳ್ಳತನಗಳು ಸಾಕ್ಷಿ ಹೇಳುತ್ತಿವೆ’ ಎಂದು ಲೇವಡಿ ಮಾಡಿದೆ.

‘ಕಾಂಗ್ರೆಸ್-ಅನ್ನಭಾಗ್ಯ, ಬಿಜೆಪಿ-ಅನ್ನಕ್ಕೆ ಕನ್ನ ಭಾಗ್ಯ, ಕಳ್ಳತನವಾದ ಬಡವರ ಪಾಲಿನ 700 ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿ ಬಿಜೆಪಿಯ ಚಿತ್ತಾಪುರ ಕ್ಷೇತ್ರದ ಅಭ್ಯರ್ಥಿಯ ಸಹೋದರನ ರೈಸ್ ಮಿಲ್ಲಿನಲ್ಲಿ ಸಿಕ್ಕಿದೆ. ಈಗಾಗಲೇ ಮಣಿಕಂಠ ರಾಠೋಡ್ ಅಕ್ಕಿ ಕಳ್ಳತನದಲ್ಲಿ ವಲ್ರ್ಡ್ ಫೇಮಸ್ ಆಗಿದ್ದರೂ ಆತನಿಗೆ ಟಿಕೆಟ್ ನೀಡಿ, ಹೊತ್ತು ಮೆರೆಸಿದ ಬಿಜೆಪಿ ನಿರ್ಲಜ್ಜತನದಲ್ಲಿ ಆತನ ಕುಕೃತ್ಯಗಳನ್ನು ಸಮರ್ಥಿಸಿತ್ತು, ಬಡವರ ಅಕ್ಕಿ ಕಳ್ಳತನಕ್ಕೆ ನಿಮ್ಮ ಸಹಕಾರ, ಸಹಮತವಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಮಣಿಕಂಠ ರಾಠೋಡ್ ಪರ ವಹಿಸಿಕೊಂಡು ಭಯಂಕರವಾದ ಸುದ್ದಿಗೋಷ್ಠಿ ಮಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ, ಈತನ ಈ ಅಕ್ಕಿ ಕಳ್ಳತನದ ಹೊಣೆಯನ್ನೂ ನೀವೇ ಹೊರುವಿರಾ?’ ಎಂದು ಕಾಂಗ್ರೆಸ್ ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

‘ಅಧಿಕಾರವಿದ್ದಾಗ ಶೇ.40ರಷ್ಟು ಕಮಿಷನ್ ಲೂಟಿ, ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಲೂಟಿಯಲ್ಲಿ ತೊಡಗಿದ್ದ ಬಿಜೆಪಿಗರು ಈಗ ಬ್ರದರ್ಸ್‍ಗಳನ್ನು ಅಖಾಡಕ್ಕೆ ಇಳಿಸಿದ್ದಾರೆ. ಪ್ರತಾಪ್ ಸಿಂಹನ ಬ್ರದರ್ ಮರಗಳ್ಳತನಕ್ಕೆ, ಮಣಿಕಂಠ ರಾಥೋಡ್‍ನ ಬ್ರದರ್ ಅಕ್ಕಿ ಕಳ್ಳತನಕ್ಕೆ. ಬಿಜೆಪಿ ನಿಮ್ಮ ಇನ್ಯಾವ ನಾಯಕರು ಬ್ರದರ್ ಗಳ ಮೂಲಕ ಇನ್ಯಾವ ಕಳ್ಳದಂಧೆಯಲ್ಲಿ ತೊಡಗಿದ್ದಾರೆ?’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *

error: Content is protected !!