ಸಮಸ್ಯೆಗೆ ಸ್ಪಂದಿಸದ ಜಿಲ್ಲಾಧಿಕಾರಿಯನ್ನು ವರ್ಗಾವಣೆಗೊಳಿಸಿ: ವಿಶ್ವನಾಥ ಪೇತ್ರಿ

ಉಡುಪಿ: ಎಸ್ ಸಿ-ಎಸ್ ಟಿ ಜನಾಂಗದವರ ಸಮಸ್ಯೆಗಳಿಗೆ ಸ್ಪಂದಿಸದೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದಾರೆ. ಅವರನ್ನು ಒಂದು ತಿಂಗಳೊಳಗೆ ವರ್ಗಾವಣೆಗೊಳಿಸಬೇಕು. ಇಲ್ಲದಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರಿಗೆ ಮುತ್ತಿಗೆ ಹಾಕ್ತೇವೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಉಡುಪಿ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ಎಚ್ಚರಿಕೆ ನೀಡಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಸ್ ಸಿ, ಎಸ್ ಟಿ ಜನಾಂಗದವರ ಮೂಲಭೂತ ಹಕ್ಕುಗಳಾದ ಕುಡಿಯುವ ನೀರು, ಡಿ.ಸಿ.ಮನ್ನಾ ಭೂಮಿ, ಸ್ವ ಉದ್ಯೋಗ ನಿರ್ವಹಣೆ, ಮರಳುಗಾರಿಕೆಯಲ್ಲಿ ಮೀಸಲಾತಿ, ನಿವೇಶನ ಹಂಚಿಕೆ ಹಾಗೂ ಪ್ರಕೃತಿ ವಿಕೋಪ ಪರಿಹಾರನಿಧಿ ನೀಡುವಲ್ಲಿ ತಾರತಮ್ಯ ಇತ್ಯಾದಿ ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ 3 ತಿಂಗಳಿಗೊಮ್ಮೆ ಕುಂದು ಕೊರತೆ ಸಭೆ ನಡೆಸಿ, ಶೋಷಿತರ ಸಮಸ್ಯೆ ಬಗೆಹರಿಸ ಬೇಕಾದದ್ದು ಜಿಲ್ಲಾಧಿಕಾರಿಯವರ ಕರ್ತವ್ಯ. ಆದರೆ, ಅವರೇ ಪ್ರಕೃತಿ ವಿಕೋಪಕ್ಕೆ ಒಳಗಾದ ಬಡ ಎಸ್ ಸಿ/ಎಸ್ ಟಿ ಕುಟುಂಬಗಳಿಗೆ ಸರಕಾರಿ ಸೌಲಭ್ಯಗಳನ್ನು ನೀಡದೇ ವಂಚಿಸಿದ್ದಾರೆ ಎಂದು ಆರೋಪಿದರು.

ಡಿಸಿ ಮನ್ನಾ ಭೂಮಿಯಲ್ಲಿ ಅಕ್ರಮ ಶಿಲೆಕಲ್ಲು ಹಾಗೂ ಕೆಂಪುಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿದ್ದಾರೆ. ಈ ಬಗ್ಗೆ ಲಿಖಿತವಾಗಿ ಮನವಿ ನೀಡಲು ಹೋದ ದಲಿತರನ್ನು ಕಚೇರಿ ಹೊರಗಡೆ ನಿಲ್ಲಿಸಿಕೊಂಡು ಮನವಿ ಪಡೆದು ಉಡಾಫೆಯಿಂದ ವರ್ತಿಸಿದ್ದಾರೆ. ಆದ್ದರಿಂದ ಎಸ್ ಸಿ-ಎಸ್ ಟಿ ಜನಾಂಗದವರ ಸಮಸ್ಯೆಗಳಿಗೆ ಸ್ಪಂದಿಸದೆ ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರನ್ನು ವರ್ಗಾವಣೆ ಮಾಡಬೇಕು. ಆ ಮೂಲಕ ನೊಂದ ಶೋಷಿತ ಸಮುದಾಯದವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಗಣೇಶ್ ಹೊಸಾಳ, ಜಿಲ್ಲಾ ಕಾರ್ಯಾಧ್ಯಕ್ಷ ಗಫೂರ್ ಕಾರ್ಕಳ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಡೂರು, ಸಂಘಟನಾ ಕಾರ್ಯದರ್ಶಿ ವಿಘ್ನೇಶ್ ಬ್ರಹ್ಮಾವರ, ಕೋಶಾಧಿಕಾರಿ ಸತೀಶ್ ಜನ್ಯಾಡಿ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಶಿರಿಯಾರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!