ನಾವು ಬದುಕುವುದರೊಂದಿಗೆ ಇತರರನ್ನು ಬದುಕಿಸುವ ಗುಣ ಬೆಳೆಸಿಕೊಳ್ಳಬೇಕು -ಶ್ರೀಈಶಪ್ರೀಯ ಸ್ವಾಮೀಜಿ

ಕುಂದಾಪುರ, ಡಿ.24: ವಿದ್ಯೆ ಹಾಗೂ ವಯಸ್ಸು ಸಮಾಜದಲ್ಲಿ ನಮಗೆ ಸಿಗುವ ಗೌರವವನ್ನು ಹೆಚ್ಚಿಸುತ್ತದೆ. ನಾವು ಬದುಕುವುದರೊಂದಿಗೆ ಇತರರನ್ನು ಬದುಕಿಸುವ ಗುಣಸ್ವಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅದಮಾರು ಮಠಾಧೀಶ ಶ್ರೀಈಶಪ್ರೀಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಬಸ್ರೂರಿನ ಶ್ರೀಶಾರದಾ ಕಾಲೇಜಿನಲ್ಲಿ ರವಿವಾರ ನಡೆದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ 89ನೇ ಹುಟ್ಟುಹಬ್ಬ ಆಚರಣೆ, ದತ್ತಿನಿಧಿ ವಿತರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಜನರ ಮನಸ್ಸಿನಲ್ಲಿ ಉಳಿಯುವುದು ಮಾಸದ ನೆನಪುಗಳು ಮಾತ್ರ. ಸಣ್ಣ ಪ್ರಾಯದಿಂದಲೇ ಗುರಿಯನ್ನು ಇರಿಸಿಕೊಂಡಾಗ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳೇ ಅಭಿವೃದ್ಧಿಯ ಕಾರ್ಯಕ್ಷೇತ್ರವಾಗಿದೆ. ಶಿಕ್ಷಣ, ಧಾರ್ಮಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಅನುಭವ ಇತರರಿಗೆ ಅನುಕರಣೀಯ ಎಂದು ಹೇಳಿದರು.

ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಸ್ಮಾ ಬಾನು ಕಾರ್ಕಳ, ಕೃಷಿ ನಮ್ಮ ದೇಶದ ಆರಾಧನೆ, ಸಂಸ್ಕೃತಿ, ಪರಂಪರೆ. ಕೃಷಿ ಬೆಳೆದರೆ ದೇಶವೂ ಬೆಳೆಯುತ್ತದೆ. ಆಧುನಿಕತೆಯ ಸ್ಪರ್ಶದ ಹೆಸರಿನಲ್ಲಿ ಎಲ್ಲವೂ ನಾಶವಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಭತ್ತದ ವಿವಿಧ ತಳಿಗಳು ಉಳಿಯ ಬೇಕು ಎನ್ನುವ ಸ್ವಯಂ ಸಂತ್ರಪ್ತಿಗಾಗಿ ಈ ಕೆಲಸ ಮಾಡುತ್ತಿದ್ದೇನೆ ಎಂದರು.

ಪ್ರತಿಷ್ಠಾನದ ವತಿಯಿಂದ 120 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ 112 ಅಶಕ್ತರಿಗೆ ಸಹಾಯಧನ ಹಸ್ತಾಂತರಿಸಲಾಯಿತು. ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯಾ, ಅನುಪಮಾ ಎಸ್.ಶೆಟ್ಟಿ, ರಾಮ್ ರತನ್ ಹೆಗ್ಡೆ, ಸುಶಾಂತ್ ರೈ, ಪ್ರೀತಮ್ ಎಸ್.ರೈ, ನಿರುಪಮಾ ಹೆಗ್ಡೆ ಉಪಸ್ಥಿತರಿದ್ದರು.

ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮ್ ಕಿಶನ್ ಹೆಗ್ಡೆ ಸ್ವಾಗತಿಸಿದರು. ಗುರುಕುಲ ಪಬ್ಲಿಕ್ ಸ್ಕೂಲ್ ಶಿಕ್ಷಕಿ ವಿಶಾಲ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ಪತ್ರಕರ್ತ ರಾಜೇಶ್ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು. ಶಾರದಾ ಕಾಲೇಜಿನ ಪ್ರಾಂಶುಪಾಲೆ ಡಾ.ಚಂದ್ರಾವತಿ ಶೆಟ್ಟಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!