ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವಿದೆ-ಪದ್ಮರಾಜ್ ಆರ್

ಬಂಟ್ವಾಳ: ರಾಜಕೀಯ ಅಧಿಕಾರವನ್ನು ಅಭಿವೃದ್ದಿಯ ಹೆಬ್ಬಾಗಿಲು ತೆಗೆಯುವ ಕೀಲಿ ಕೈ ಎಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೇಳಿದ್ದರು. ಹಾಗಾಗಿ ರಾಜಕೀಯ ಅಧಿಕಾರ ಕೈಗೆ ಬಂದಾಗ ಮಾತ್ರ ಅಭಿವೃದ್ಧಿಯ ಹೆಬ್ಬಾಗಿಲು ತೆಗೆಯುವ ಪ್ರಯತ್ನವನ್ನು ಶೋಷಿತ ಅವಕಾಶ ವಂಚಿತರ ಪರವಾಗಿ ಮಾಡಬೇಕು. ಯುವವಾಹಿನಿಯು ಉದ್ಯಮ, ಉದ್ಯೋಗ, ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಬಯಸುತ್ತದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು.

ನಗರ ಹೊರವಲಯದ ಬೆಂಜನಪದವಿನಲ್ಲಿ ನಡೆದ ಯುವವಾಹಿನಿ ಸಂಸ್ಥೆಯ 36ನೇ ವಾರ್ಷಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಯುವವಾಹಿನಿ ಮಾಡುತ್ತಿವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳ ಹಾದಿಯಲ್ಲಿ ಮುನ್ನಡೆಯ ಬೇಕಾಗಿದೆ ಎಂದು ಪದ್ಮರಾಜ್ ಆರ್. ಕರೆ ನೀಡಿದರು.

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ ಬಿ. ಅಧ್ಯಕ್ಷತೆ ವಹಿಸಿದ್ದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಡಾ. ತುಕರಾಮ ಪೂಜಾರಿ ಪ್ರಧಾನ ಭಾಷಣಗೈದರು. ಮುಖ್ಯಮಂತ್ರಿಯ ಮಾಜಿ ಆಪ್ತ ಸಹಾಯಕ ನಿರ್ಮಲ್ ಜಗನ್ನಾಥ ಬಂಗೇರ, ಉದ್ಯಮಿಗಳಾದ ನಟೇಶ್ ಪೂಜಾರಿ ಬೆಂಗಳೂರು, ಲೋಕೇಶ್ ಪೂಜಾರಿ ಕಲ್ಲಡ್ಕ, ವಾರ್ಷಿಕ ಸಮಾವೇಶದ ನಿರ್ದೇಶಕ ಭುವನೇಶ್ ಪಚ್ಚಿನಡ್ಕ ಉಪಸ್ಥಿತರಿದ್ದರು.

ನಾರ್ದನ್ ಸ್ಕೈ ಪ್ರಾಪರ್ಟೀಸ್ ನಿರ್ದೇಶಕಿ ಕೃತಿನ್ ಅಮೀನ್ ‘ಯುವ ಸಿಂಚನ’ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ ದರು. ಸಂಪಾದಕ ದಿನಕರ್ ಡಿ.ಬಂಗೇರ ಹಾಗು ಕಾರ್ಯನಿರ್ವಾಹಕ ಸಂಪಾದಕ ಜಗದೀಶ್‌ಚಂದ್ರ ಡಿ.ಕೆ. ಉಪಸ್ಥಿತರಿದ್ದರು.

ಯುವ ವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಉದಯ ಅಮೀನ್ ಮಟ್ಟು ನೂತನ ಕಾರ್ಯಕಾರಿ ಸಮಿತಿ ಯನ್ನು ಸಭೆಗೆ ಪರಿಚಯಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ ಬಿ., ನೂತನ ಅಧ್ಯಕ್ಷ ಹರೀಶ್ ಕೆ.ಪೂಜಾರಿ ನೇತೃತ್ವದ ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು.

ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಸುಮಾಕರ ಕುಂಪಲ ವಾರ್ಷಿಕ ವರದಿ ವಾಚಿಸಿದರು. ವಾರ್ಷಿಕ ಸಮಾವೇಶದ ಸಂಚಾಲಕ ಹಾಗು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಹಾಗು ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.

ಕೆ. ಚಿತ್ತರಂಜನ್ ಗರೋಡಿಗೆ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ, ಸಜಿಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ಯುವ ವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ, ಮನೋಜ್ ಕುಮಾರ್ ಕಟ್ಟೆಮಾರ್, ಶ್ರೀನಿವಾಸ ಪೂಜಾರಿ ಮೆಲ್ಕಾರ್, ಅಕ್ಷತಾಗೆ ಯುವ ವಾಹಿನಿ ಯುವ ಸಾಧನಾ ಪುರಸ್ಕಾರ ಪ್ರದಾನ ಮಾಡಲಾಯಿತು. ವೇದಾವತಿ, ಚೈತ್ರಾ, ಜಯಂತ್ ಅಮೀನ್, ಯೋಗ್ನ ಅಮೀನ್‌ಗೆ ಯುವವಾಹಿನಿ ಗೌರವ ಅಭಿನಂದನೆ ಸಲ್ಲಿಸಲಾಯಿತು. ಡಾ.ಸಂಜಿತ್ ಎಸ್. ಅಂಚನ್, ಡಾ.ಶುಭಕರ್ ಅಂಚನ್, ಡಾ. ಅಕ್ಷತಾ ಕೋಟ್ಯಾನ್, ಡಾ.ಲತಾ ಬಿ. ಅವರಿಗೆ ಅಭಿನಂದನೆ, ಅಭಿನ್ ಬಂಗೇರಗೆ ಯುವವಾಹಿನಿ ಸಾಧಕ ಪುರಸ್ಕಾರ ಪ್ರದಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!