ಹಿಜಾಬ್ ನಿರ್ಬಂಧ ವಾಪಸ್ ಪಡೆಯುವ ಸಿಎಂ ನಿರ್ಧಾರ ಸ್ವಾಗತಾರ್ಹ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ
ಉಡುಪಿ: ರಾಜ್ಯದ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ಇರುವ ನಿರ್ಬಂಧವನ್ನು ವಾಪಸ್ ಪಡೆಯುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಅತ್ಯಂತ ಸ್ವಾಗತಾರ್ಹ. ಇದೊಂದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಸಾವಿರಾರು ಮುಸ್ಲಿಮ್ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಕಂಟಕವಾಗಿದ್ದ ಈ ಹಿಂದಿನ ಬಿಜೆಪಿ ಸರ್ಕಾರದ ತೀವ್ರ ಜನ ವಿರೋಧಿ ನಿರ್ಧಾರವನ್ನು ವಾಪಸ್ ಪಡೆಯುತ್ತೇವೆ ಎಂದು ಸಿದ್ದರಾಮಯ್ಯ ನವರು ಹೇಳಿರುವುದು ಅವರ ಜನಪರ ನಿಲುವಿನ ದ್ಯೋತಕವಾಗಿದೆ. ಇದು ಜನಪರ ಸರಕಾರವೊಂದು ತೆಗೆದುಕೊಳ್ಳಲೇ ಬೇಕಾದ ನಿರ್ಧಾರವಾಗಿತ್ತು. ಸಿದ್ದರಾಮಯ್ಯನವರು ಆದಷ್ಟು ಬೇಗ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಯಾಸೀನ್ ಮಲ್ಪೆ ಹೇಳಿದ್ದಾರೆ.
ಈ ಹಿಂದಿನ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರಕಾರ ದ್ವೇಷ, ಅಸಹನೆ, ಅಸಹಿಷ್ಣುತೆಯನ್ನೇ ತನ್ನ ಆಡಳಿತ ಮಂತ್ರವಾಗಿ ಸ್ವೀಕರಿಸಿದ ಪರಿಣಾಮ ಸಾವಿರಾರು ಅಮಾಯಕ ಮುಸ್ಲಿಮ್ ವಿದ್ಯಾರ್ಥಿನಿ ಯರು ತಮ್ಮ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸ ಬೇಕಾಯಿತು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗಳ ಮೂಲಕ ತಮ್ಮ ಪ್ರತಿಭೆಗಳನ್ನು ಸಾಬೀತುಪಡಿಸುತ್ತಿದ್ದ ಈ ವಿದ್ಯಾರ್ಥಿನಿಯರು ಸರ್ಕಾರದ ಅಪ್ರಬುದ್ಧ ನೀತಿಗಳಿಂದಾಗಿ ತಮ್ಮ ಸಾಧನೆಗಳನ್ನು ಮುಂದುವರೆಸುವ ಅವಕಾಶವನ್ನು ಕಳೆದುಕೊಳ್ಳಬೇಕಾಯಿತು. ಅವರನ್ನು ಶಾಲಾ ಕಾಲೇಜುಗಳಿಂದ ಹೊರ ಹಾಕಲಾಯಿತು. ಯಾರಿಗೂ ಯಾವುದೇ ತೊಂದರೆ ಕೊಡದ ತಲೆಗೆ ಹಾಕುವ ಒಂದು ಬಟ್ಟೆಯ ವಿಚಾರದಲ್ಲಿ ಸರಕಾರದ ನೇತೃತ್ವದಲ್ಲೇ ಅನಗತ್ಯ ವಿವಾದ ಸೃಷ್ಟಿಸಲಾಯಿತು.
ಇಡೀ ರಾಜ್ಯದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿನಿರ್ಮಿಸಲಾಯಿತು. ವಿದ್ಯಾರ್ಥಿಗಳನ್ನು ಜಾತಿ ಧರ್ಮದ ಹೆಸರಲ್ಲಿ ವಿಭಜಿಸಿ ಪರಸ್ಪರರ ವಿರುದ್ಧ ಎತ್ತಿ ಕಟ್ಟಲಾಯಿತು. ಶಾಲಾ ಕಾಲೇಜುಗಳ ಮಕ್ಕಳಲ್ಲಿ ಭಯದ ವಾತಾವರಣ ಸೃಷ್ಟಿಸಲಾಯಿತು. ಅದೆಷ್ಟೋ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇವೆಲ್ಲವೂ ಕೇವಲ ರಾಜಕೀಯ ಲಾಭಕ್ಕಾಗಿ ನಡೆಸಿದ ಅಮಾನವೀಯ ಮತ್ತು ಅನೈತಿಕ ಕೃತ್ಯವಾಗಿತ್ತು.
ಅಂತಹ ತೀವ್ರ ಜನ ವಿರೋಧಿ ನೀತಿಗಳನ್ನು ಅನುಸರಿಸಿದ್ದಕ್ಕೆ ಕಳೆದ ವಿಧಾನ ಸಭಾ ಚುನಾವಣೆ ಯಲ್ಲಿ ರಾಜ್ಯದ ಜನರು ಬಿಜೆಪಿಯನ್ನು ಹೀನಾಯವಾಗಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ನಿಮ್ಮ ದ್ವೇಷ, ಅಸಹಿಷ್ಣುತೆಯನ್ನು ಕರುನಾಡು ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಆದರೆ ಕೋಮು ದ್ವೇಷವನ್ನೇ ಉಸಿರಾಡುವ ಬಿಜೆಪಿ ಇನ್ನೂ ಪಾಠ ಕಲಿತಿಲ್ಲ. ಹಾಗಾಗಿ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಇಲ್ಲದ ವಿವಾದವನ್ನು ಸೃಷ್ಟಿಸಲು ಹೆಣಗಾಡುತ್ತಿದೆ. ಹಿಜಾಬ್ ಮೇಲಿನ ನಿರ್ಬಂಧ ವಾಪಸ್ ಪಡೆಯುವುದು ಯಾರಿಗೂ ಯಾವುದೇ ತೊಂದರೆ ನೀಡದ ಆದರೆ ಸಾವಿರಾರು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಶಿಕ್ಷಣ ಮುಂದುವರೆಸಲು ಅವಕಾಶ ನೀಡುವ ಒಂದು ಧನಾತ್ಮಕ, ಜನಪರ ಕ್ರಮವಾಗಿದೆ. ಇದನ್ನು ಇಡೀ ನಾಡು ಮುಕ್ತಕಂಠದಿಂದ ಶ್ಲಾಘಿಸಿ ಸ್ವಾಗತಿಸಬೇಕಾಗಿದೆ. ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ದ್ವೇಷ ರಾಜಕೀಯವನ್ನೇ ತಮ್ಮ ನೀತಿಯನ್ನಾಗಿ ಮಾಡಿಕೊಂಡಿರುವ ಬಿಜೆಪಿಯ ಒತ್ತಡ ತಂತ್ರಗಳಿಗೆ ಕಿಮ್ಮತ್ತು ನೀಡದೆ ಕೂಡಲೇ ಈ ಬಗ್ಗೆ ಆದೇಶ ಹೊರಡಿಸಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಆಗ್ರಹಿಸುತ್ತದೆ ಎಂದು ಯಾಸೀನ್ ಮಲ್ಪೆ ಅವರು ತಿಳಿಸಿದ್ದಾರೆ.