ಆವಾಸ್ ಯೋಜನೆಯ ಫಲಾನುಭವಿ 1ಲಕ್ಷ ರು. ಪಾವತಿಸಿದರೆ ಸಾಕು, ಉಳಿದಿದ್ದನ್ನು ಸರ್ಕಾರ ಭರಿಸಲಿದೆ: ಸಚಿವ ಜಮೀರ್ ಅಹ್ಮದ್

ಬೆಂಗಳೂರು: ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ (ನಗರ) ಸರ್ವರಿಗೂ ಸೂರು ಅಭಿಯಾನದ ಮೂಲಕ ಕರ್ನಾಟಕ ಕೊಳಗೇರಿಅಭಿವೃದ್ಧಿಮಂಡಳಿಯು ಅನುಷ್ಠಾನಗೊಳಿಸುತ್ತಿರುವ 1.80ಲಕ್ಷ ಮನೆಗಳಿಗೆ ಫಲಾನುಭವಿಗಳು ಪಾವತಿಸಬೇಕಿದ್ದ 4.5 ಲಕ್ಷ ರೂ.ಗಳಲ್ಲಿ ಕೇವಲ ಒಂದು ಲಕ್ಷ ರೂ. ಭರಿಸಿದರೆ ಸಾಕು ಉಳಿದ 3.5 ಲಕ್ಷ ರು.ಗಳನ್ನು ರಾಜ್ಯ ಸರ್ಕಾರವೇ ಭರಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌, ಈ ಯೋಜನೆಯಡಿ ಮೊದಲ ಹಂತದಲ್ಲಿ 48,796 ಮನೆಗಳನ್ನು ಪೂರ್ಣಗೊಳಿಸಲು 500 ಕೋಟಿ ರೂ. ಬಿಡುಗಡೆ ಮಾಡಲು ಇಂದಿನ ಸಭೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ. ಉಳಿದ 1.30ಸಾವಿರ ಮನೆಗಳನ್ನು ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಪೂರ್ಣಗೊಳಿಸಲು ಸಂಪುಟ ಸಭೆ ಸಮ್ಮತಿ ನೀಡಿದೆ ಎಂದರು.

ಯೋಜನೆಯಡಿ 2018ರಿಂದ 2023ರವರೆಗೆ ರಾಜ್ಯಕ್ಕೆ 1,80,253 ಮನೆಗಳು ಮಂಜೂರಾಗಿದ್ದರೂ ಫಲಾನುಭವಿಗಳಿಗೆ ನಿಗದಿಪಡಿಸಿದ್ದ 4.5 ಲಕ್ಷ ರೂ. ಹಣವನ್ನು ಪಾವತಿಸಲು ಬಹುತೇಕರಿಗೆ ಸಾಧ್ಯವಾಗದೆ ಪೂರ್ಣಗೊಳಿಸಲಾಗಿರಲಿಲ್ಲ. ಈ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲು ಕೊಳಗೇರಿಗಳಲ್ಲಿನ ಶೆಡ್‌,ಗುಡಿಸಲುಗಳನ್ನು ತೆರವುಗೊಳಿಸಲಾ ಗಿದೆ. ಅಲ್ಲಿನ ನಿವಾಸಿಗಳು ಮನೆಗಳಿಲ್ಲದೆ ತೊಂದರೆಯಲ್ಲಿದ್ದಾರೆ. ಹಾಗಾಗಿ ಸರ್ವರಿಗೂ ಸೂರು ಕಲ್ಪಿಸುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಪ್ರತಿ ಮನೆಗೆ ಅರ್ಜಿದಾರರು 4.5 ಲಕ್ಷ ರೂ. ಬದಲಿಗೆ ಒಂದು ಲಕ್ಷ ರೂ. ಪಾವತಿಸಿದರೆ ಸಾಕು ಎಂದು ಜಮೀರ್​ ತಿಳಿಸಿದರು.

ಈ ಯೋಜನೆಗೆ ಒಟ್ಟು 6,170 ಕೋಟಿ ರೂ. ಬೇಕಾಗಲಿದೆ. ಪ್ರತಿ ಮನೆ ನಿರ್ಮಾಣಕ್ಕೆ 7.5 ಲಕ್ಷ ರೂ. ವೆಚ್ಚವಾಗಲಿದೆ. ಇದರಲ್ಲಿ ರಾಜ್ಯ ಸರ್ಕಾರದಿಂದ ಸಾಮಾನ್ಯ ವರ್ಗದವರಿಗೆ 1.20, ಎಸ್​ಸಿ, ಎಸ್​ಟಿಗಳಿಗೆ 2 ಲಕ್ಷ ರೂ. ಸಹಾಯಧನ ಹಾಗೂ ಕೇಂದ್ರ ಸರ್ಕಾರದಿಂದ ಉಳಿದ ಸಹಾಯಧನ ಸೇರಿ ಒಟ್ಟು 3 ಲಕ್ಷ ರೂ. ಭರಿಸುವುದು.

ಉಳಿದ 4.5 ಲಕ್ಷ ರೂ. ಹಣವನ್ನು ಫಲಾನುಭವಿಗಳು ಭರಿಸಬೇಕೆಂಬ ನಿಯಮ ಇತ್ತು. ಆದರೆ, ಈ ಹಣವನ್ನು ಬಹುತೇಕ ಅರ್ಜಿದಾರರು ಭರಿಸಲಾಗಿಲ್ಲ. ಹಾಗಾಗಿ ಇದೀಗ ಸರ್ಕಾರ ಫಲಾನುಭವಿ ತಲಾ ಕೇವಲ 1 ಲಕ್ಷ ರೂ. ಪಾವತಿಸಿದರೆ ಸಾಕು ಎಂದು ತೀರ್ಮಾನಿಸಲಾಗಿದೆ. ಇದರಿಂದ ಫಲಾನುಭವಿಗಳಿಂದ 480 ಕೋಟಿ ರೂ. ಬರಲಿದೆ. ಉಳಿದ 4932 ಕೋಟಿ ರೂ.ಗಳನ್ನು ಸರ್ಕಾರವೇ ಬರಿಸಲಿದೆ ಎಂದು ಜಮೀರ್​ ಮಾಹಿತಿ ನೀಡಿದರು.

ಸಚಿವ ಸಂಪುಟ ಸಭೆಯ ಬಳಿಕ ಕಾನೂನು-ಸಂದೀಯ ಸಚಿವ ಎಚ್‌.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಎಚ್‌ಎಎಲ್‌ನಿಂದ 91.50 ಕೋಟಿ, ಎಚ್‌ಎಂಟಿಯಿಂದ 3.79 ಕೋಟಿ ಬಾಕಿ ಸಂಗ್ರಹಿಸ ಲಾಗಿದೆ. ಇದೇ ರೀತಿ ಹಲವು  ಸರ್ಕಾರಿ ಸಂಸ್ಥೆಗಳ ಸ್ವತ್ತುಗಳಿಂದ ಬಾಕಿ ಉಳಿದಿದೆ. ಇದರ ಮೊತ್ತ ಸಾವಿರಾರು ಕೋಟಿ ಆಗಬಹುದು. 2024 ರ ಜೂನ್‌ 30 ರವರೆಗೆ ಒಂದು ಬಾರಿ ಪರಿಹಾರ ಯೋಜನೆ ವಿಸ್ತರಿಸಲಾಗಿದೆ ಎಂದರು.

136 ಸಂಚಾರಿ ಸಿಗ್ನಲ್‌ ಉನ್ನತೀಕರಣ: ಬೆಂಗಳೂರು ನಗರ ಸಂಚಾರ ವಿಭಾಗ ವ್ಯಾಪ್ತಿಯಲ್ಲಿರುವ 136 ಸಂಚಾರಿ ಸಿಗ್ನಲ್‌ ವ್ಯವಸ್ಥೆಗಳನ್ನು ಉನ್ನತೀಕರಿಸಲು ಮತ್ತು ಅಡಾಪ್ಟಿವ್‌ ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ ಸಿಂಕ್ರೊನೈಸೇಶನ್‌ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. 29 ಸ್ಥಳಗಳಲ್ಲಿ ಹೊಸ ಅಡಾಪ್ಟಿವ್‌ ಸಂಚಾರ ವ್ಯವಸ್ಥೆ ನಿಯಂತ್ರಣ ಘಟಕಗಳು 5 ವರ್ಷಗಳ ಅವಧಿಗೆ ನಿರ್ವಹಿಸಲಿವೆ. ಇದಕ್ಕೆ 58.54 ಕೋಟಿ ವೆಚ್ಚವಾಗಲಿದೆ. ಇಂಟರ್‌ ಸೆಕ್ಷನ್‌ಗಳಲ್ಲಿ ವಾಹನಗಳ ಚಾಲನೆ ಸುಗಮವಾಗಲಿದೆ. ದಟ್ಟಣೆ ಕಡಿಮೆಗೊಳಿಸಲು ಸಹಾಯಕವಾಗಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!