ಸಂಸತ್ ಭದ್ರತಾ ಲೋಪ: ಅಧೀರ್ ರಂಜನ್ ಚೌಧರಿ ಸೇರಿ 33 ಸಂಸದರು ಲೋಕಸಭೆಯಿಂದ ಅಮಾನತು

ನವದೆಹಲಿ: ಸಂಸತ್ ಭದ್ರತಾ ಲೋಪ ವಿರೋಧಿಸಿ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ ಒಂದೇ ದಿನ 33 ಸಂಸದರನ್ನು ಸೋಮವಾರ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ.

ಇಂದು ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ ಘಟನೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳ ಸಂಸದರು ಸದನದೊಳಗೆ ಫಲಕಗಳನ್ನು ಪ್ರದರ್ಶಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಅಧೀರ್ ರಂಜನ್ ಚೌಧರಿ, ದ್ರಾವಿಡ ಮುನ್ನೇತ್ರ ಕಳಗಂ ಸಂಸದರಾದ ಟಿ ಆರ್ ಬಾಲು ಮತ್ತು ದಯಾನಿಧಿ ಮಾರನ್ ಹಾಗೂ ತೃಣಮೂಲ ಕಾಂಗ್ರೆಸ್‌ನ ಸೌಗತ ರಾಯ್ ಸೇರಿದಂತೆ 33 ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಸ್ಪೀಕರ್ ಓಂ ಬಿರ್ಲಾ ಅವರ ಸೂಚನೆ ನಂತರ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಅಮಾನತು ಕುರಿತು ಪ್ರಸ್ತಾವನೆ ಮಂಡಿಸಿದರು ಮತ್ತು ಅದನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.

ನಂತರ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಇದುವರೆಗೆ 47 ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನ ಉಭಯ ಸದನಗಳಿಂದ ಅಮಾನತುಗೊಳಿಸಲಾಗಿದೆ. ಡಿಸೆಂಬರ್ 13 ರಂದು ನಡೆದ ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯ ಬಗ್ಗೆ ವಿರೋಧ ಪಕ್ಷದ ಸಂಸದರು ಗದ್ದಲವನ್ನು ಸೃಷ್ಟಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. 

Leave a Reply

Your email address will not be published. Required fields are marked *

error: Content is protected !!