ರಾಜಸ್ಥಾನದ ಸಿಎಂ ಆಗಿ ಭಜನ್ ಲಾಲ್ ಶರ್ಮಾ ಆಯ್ಕೆ!
ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿಯ ಹೆಸರನ್ನು ಪ್ರಕಟಿಸಲಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಜನ್ ಲಾಲ್ ಶರ್ಮಾ ಅವರ ಹೆಸರನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಭಜನ್ ಲಾಲ್ ಶರ್ಮಾ ಮೊದಲ ಬಾರಿಗೆ ಶಾಸಕರಾಗಿದ್ದಾರೆ. 4 ಬಾರಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರಿಗೆ ಆರ್‌ಎಸ್‌ಎಸ್ ಮತ್ತು ಎಬಿವಿಪಿ ಜೊತೆ ನಂಟಿದೆ. ಸಂಗನೇರ್ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಅಲ್ಲಿ ಭಜನ್ ಲಾಲ್ ಶರ್ಮಾ ಗೆದ್ದಿದ್ದರು. ಸಂಘಟನೆಯಲ್ಲಿ ಅವರ ಪ್ರಮುಖ ಪಾತ್ರವನ್ನು ಪರಿಗಣಿಸಿ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಬಹುದೊಡ್ಡ ಜವಾಬ್ದಾರಿ ನೀಡಲಾಗಿದೆ.
ರಾಜಸ್ಥಾನದಲ್ಲೂ ಎರಡು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ದಲಿತ ಸಮುದಾಯ ಪ್ರೇಮ್ ಚಂದ್ ಬೈರವಾ ಹಾಗೂ ರಜಪೂತ ಸಮುದಾಯದ ದಿಯಾ ಕುಮಾರಿ ಡಿಸಿಎಂ ಆಗಲಿದ್ದಾರೆ. ಇನ್ನು ಸ್ಪೀಕರ್ ಆಗಿ ವಾಸುದೇವ ದೇವನಾನಿ ಅವರನ್ನು ಆಯ್ಕೆ ಮಾಡಲಾಗಿದೆ. ಇದಕ್ಕೂ ಮುನ್ನ ಹೈಕಮಾಂಡ್ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸರೋಜ್ ಪಾಂಡೆ ಮತ್ತು ವಿನೋದ್ ತಾವ್ಡೆ ಅವರನ್ನು ವೀಕ್ಷಕರಾಗಿ ಜೈಪುರಕ್ಕೆ ಕಳುಹಿಸಿತ್ತು. ಇದಕ್ಕೂ ಮುನ್ನ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಭೇಟಿ ಮಾಡಿದ್ದರು.
ಚುನಾವಣಾ ಗೆಲುವಿನ ನಂತರ ಪಕ್ಷದ ಹಲವು ಶಾಸಕರಿಗೆ ವಸುಂಧರಾ ಅವರು ಔತಣಕೂಟ ನೀಡಿದ್ದು, ಒತ್ತಡದ ರಾಜಕಾರಣವೆಂಬಂತಾಗಿತ್ತು. ಆದರೆ, ನಡ್ಡಾ ಅವರನ್ನು ಭೇಟಿಯಾದ ನಂತರ ವಸುಂಧರಾ ಅವರ ಸ್ವರ ಬದಲಾದಂತಿದೆ. ತಾವು ಪಕ್ಷದ ಶಿಸ್ತಿನ ಕಾರ್ಯಕರ್ತೆ ಎಂದು ಬಣ್ಣಿಸಿದರು. ಈ ಹಿಂದೆ, ರಾಜಸ್ಥಾನದ ರಾಜಸಮಂದ್ ಸಂಸದೆ ದಿಯಾ ಕುಮಾರಿ, ಜೈಪುರ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್, ರಾಜ್ಯಸಭಾ ಸದಸ್ಯ ಕಿರೋರಿ ಲಾಲ್ ಮೀನಾ ಮತ್ತು ಅಲ್ವಾರ್ ಸಂಸದ ಬಾಬಾ ಬಾಲಕ್ ನಾಥ್ ಅವರು ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಪಕ್ಷ ವಸುಂಧರಾ ಅವರನ್ನು ಬಿಟ್ಟು ಬೇರೆಯವರಿಗೆ ಪಟ್ಟ ಕಟ್ಟಬಹುದು ಎಂಬ ಊಹಾಪೋಹಗಳು ಶುರುವಾಗಿತ್ತು.
ರಾಜಸ್ಥಾನದ ಕರಣ್‌ಪುರ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ, ಎಲ್ಲಾ 199 ಸ್ಥಾನಗಳಿಗೆ ನವೆಂಬರ್ 25 ರಂದು ಚುನಾವಣೆ ನಡೆಯಿತು. ಅದರ ಫಲಿತಾಂಶಗಳು ಡಿಸೆಂಬರ್ 3 ರಂದು ಬಂದಿತ್ತು. ರಾಜಸ್ಥಾನ ವಿಧಾನಸಭಾ ಚುನಾವಣೆಯ ರಾಜಕೀಯ ಕದನದಲ್ಲಿ ಕಾಂಗ್ರೆಸ್ ಅನ್ನು ಸೋಲಿಸುವ ಮೂಲಕ ಬಿಜೆಪಿ 115 ಸ್ಥಾನಗಳನ್ನು ಗೆದ್ದಿದೆ. ಆದರೆ ಕಾಂಗ್ರೆಸ್‌ಗೆ 69 ಸ್ಥಾನಗಳು ಮಾತ್ರ ಸಿಗಲಿವೆ. ಇದಲ್ಲದೇ 15 ಸ್ಥಾನಗಳು ಇತರರ ಪಾಲಾಗಿವೆ.