ವೆಲ್‌ಕಮ್‌ಗ್ರೂಪ್‌ ಗ್ರ್ಯಾಜುಯೇಟ್‌ ಸ್ಕೂಲ್‌ ಆಫ್‌ ಹೊಟೇಲ್‌ ಎಡ್ಮಿನಿಸ್ಟ್ರೇಶನ್‌: ವಾರ್ಷಿಕೋತ್ಸವ 2023

ಮಣಿಪಾಲ್‌- ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ)ಯ ಪ್ರತಿಷ್ಠಿತ ಘಟಕವಾಗಿರುವ ದ ವೆಲ್‌ಕಮ್‌ ಗ್ರೂಪ್‌ ಗ್ರ್ಯಾಜುಯೇಟ್‌ ಸ್ಕೂಲ್‌ ಆಫ್‌ ಹೊಟೇಲ್‌ ಎಡ್ಮಿನಿಸ್ಟ್ರೇಶನ್‌ [ಡಬ್ಲ್ಯುಜಿಎಸ್‌ಎಚ್‌ಎ – ವಾಗ್ಶ] ದ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಡಿಸೆಂಬರ್‌ 7, 2023 ರಂದು ಮಣಿಪಾಲ್‌ ಫಾರ್ಚೂನ್‌ ಇನ್ನ್‌ ವ್ಯಾಲಿವ್ಯೂನ ಮುಕ್ತ ಸಭಾಂಗಣದಲ್ಲಿ ಜರಗಿತು.

ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ, ಐಟಿಸಿ ನಿಯಮಿತದ ಹೊಟೇಲ್ಸ್‌ ವಿಭಾಗದ ಮಾನವ ಸಂಪನ್ಮೂಲ ಮತ್ತು ವ್ಯಾಸಂಗ ಮತ್ತು ಅಭಿವೃದ್ಧಿ ವಿಭಾಗದ [ಎಚ್‌ಆರ್‌ ಆ್ಯಂಡ್‌ ಲರ್ನಿಂಗ್‌ ಆ್ಡಂಡ್‌ ಡೆವಲಪ್‌ಮೆಂಟ್‌, ಹೊಟೇಲ್ಸ್‌ ಡಿವಿಜನ್‌, ಐಟಿಸಿ ಲಿ., ಇದರ] ಉಪಾಧ್ಯಕ್ಷರಾದ ಸಂಜಯ್‌ ಬೋಸ್‌, ಮಾಹೆಯ ಸಹಕುಲಾಧಿಪತಿ ಡಾ. ಎಚ್‌. ಎಸ್‌. ಬಲ್ಲಾಳ್‌, ಉಪಕುಲಪತಿ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್‌, ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹಉಪಕುಲತಿ ಡಾ. ನಾರಾಯಣ ಸಭಾಹಿತ್‌, ಕಾರ್ಯತಂತ್ರ ಮತ್ತು ಯೋಜನಾ ವಿಭಾಗದ ಸಹಉಪಕುಲತಿ ಡಾ. ಎನ್‌. ಎನ್‌. ಶರ್ಮಾ. ಕುಲಸಜಿವ ಡಾ. ಗಿರಿಧರ್‌ ಕಿಣಿ ಮೊದಲಾದ ಗಣ್ಯರ ಸಹಿತ, ಸಿಬಂದಿಗಳು, ಅತಿಥಿಗಳು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

‘ಸುಸ್ಥಿರ ಅಭಿವೃದ್ಧಿಯ ಗುರಿ [ಸಸ್ಟೇನೇಬಲ್‌ ಡೆವಲಪ್‌ಮೆಂಟ್‌ ಗೋಲ್‌-ಎಸ್‌ಡಿಜಿ] ಯತ್ತ ಕೇಂದ್ರೀಕರಿಸಿರುವ ಭಾರತದ ಕಿರು ಅಡುಗೆಪದ್ಧತಿಗಳು’ ಎಂಬುದು ಕಾರ್ಯಕ್ರಮದ ಮುಖ್ಯ ಆಶಯವಾಗಿತ್ತು, ಈ ಆಶಯವು ಸುಸ್ಥಿರ ಅಭಿವೃದ್ಧಿಯ ಗುರಿ ಮತ್ತು ಬಿಕಾನೇರ್‌, ಇಂದೋರ್‌ ಹಾಗೂ ಭುವನೇಶ್ವರಗಳ ಹೆಚ್ಚಿನ ಪ್ರಸಿದ್ಧವಲ್ಲದ ಕಿರು ಅಡುಗೆಪದ್ಧತಿಗಳತ್ತ ಬೆಳಕುಬೀರುವುದರ ಜೊತೆಗೆ  ಭಾರತದ ಶ್ರೀಮಂತ, ಬಹುಮುಖಿ ಪಾಕಪರಂಪರೆಯ ಕುರಿತ ವಾಗ್ಶ[ಡಬ್ಲ್ಯುಜಿಎಸ್‌ಎಚ್‌ಎ] ದ ಬದ್ಧತೆಯನ್ನು ಎತ್ತಿಹಿಡಿಯುತ್ತದೆ.

ವಾಗ್ಶ [ಡಬ್ಲ್ಯುಜಿಎಸ್‌ಎಚ್‌ಎ] ದ ಪ್ರಾಂಶುಪಾಲ ಡಾ. ಚೆಫ್‌. ಕೆ. ತಿರುಗ್ನಾನಸಂಬಂಧಮ್‌ ಅವರು ವಾರ್ಷಿಕ ವರದಿಯನ್ನು ಮಂಡಿಸಿ, ಕಾಲೇಜಿನ ಮಾನ್ಯತೆ, ಸಹಭಾಗಿತ್ವ, ವಿದ್ಯಾರ್ಥಿಗಳ ಸಾಧನೆಗಳು, ಅಂತಾರಾಷ್ಟ್ರೀಯ ಅಧ್ಯಯನ ಪ್ರವಾಸ. ಬೋಧಕ ಸಿಬಂದಿಯ ಸಾಧನೆಯೂ ಸೇರಿದಂತೆ ಕಾಲೇಜು ಕ್ರಮಿಸಿರುವ ಪ್ರಮುಖ ಮೈಲಿಗಲ್ಲುಗಳ ಸ್ಥೂಲ ಚಿತ್ರಣ ನೀಡಿದರು.  
 

ಮುಖ್ಯ ಅತಿಥಿ ಎಚ್‌ಆರ್‌ ಆ್ಯಂಡ್‌ ಲರ್ನಿಂಗ್‌ ಆ್ಡಂಡ್‌ ಡೆವಲಪ್‌ಮೆಂಟ್‌, ಹೊಟೇಲ್ಸ್‌ ಡಿವಿಜನ್‌, ಐಟಿಸಿ ಲಿ., ಇದರ ಉಪಾಧ್ಯಕ್ಷ ಸಂಜಯ್‌ ಬೋಸ್‌ ಅವರು ವಾಗ್ಶ [ಡಬ್ಲ್ಯುಜಿಎಸ್‌ಎಚ್‌ಎ] ದ ಸಾಧನೆಯನ್ನು ಶ್ಲಾಘಿಸಿದರಲ್ಲದೆ, ಐಟಿಸಿಯ ಜೊತೆಗಿನ ಪಾಲುದಾರಿಕೆಯಲ್ಲಿ ರಾಷ್ಟ್ರ ನಿರ್ಮಾಣದ ಕೆಲಸಕ್ಕೆ ವಾಗ್ಶ ನೀಡುತ್ತಿರುವ ಕೊಡುಗೆಯನ್ನು ಉಲ್ಲೇಖಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಹೊಂದುವುದರ ಜೊತೆಗೆ, ಮಾನವೀಯ ಮೌಲ್ಯ ಮತ್ತು ಸಾಮಾಜಿಕ ಅಂತಃಪ್ರಜ್ಞೆಯ ಜಾಗೃತಿಗಾಗಿಯೂ ಕೊಡುಗೆ ನೀಡುತ್ತಿದೆ ಎಂದು ಅವರು ಬಣ್ಣಿಸಿದರು.
 
ಮಾಹೆಯ ಘಟಿಕೋತ್ಸವ ಮತ್ತು ದೆಹಲಿಯ ಜಿ-20  ಸಮಾವೇಶದ ಸಂದರ್ಭದಲ್ಲಿ ವಾಗ್ಶ [ಡಬ್ಲ್ಯುಜಿಎಸ್‌ಎಚ್‌ಎ] ನೀಡಿದ ಅನನ್ಯ ಸೇವೆಯನ್ನು ಸ್ಮರಿಸಿಕೊಂಡ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್‌ ಅವರು, ‘ಈ ಸಂಸ್ಥೆಯು ಮೊದಲ ಸಾಲಿನ ಹೊಟೇಲ್‌ ಸ್ಕೂಲ್‌ ಆಗಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ ಮತ್ತು ಮಾಹೆಯ ಎನ್‌ಐಆರ್‌ಎಫ್‌ ಶ್ರೇಯಾಂಕಕ್ಕೆ ಗಮನಾರ್ಹ ಕೊಡುಗೆ ನೀಡಿದೆ’ ಎಂದರು.
 

ವಾಗ್ಶದ ಬೋಧಕ ಸಿಬಂದಿಗಳ 52 ಲೇಖನಗಳನ್ನು ಹೊಂದಿರುವ ಹೊಸ ಪುಸ್ತಕ ‘ಅತಿಥಿಸತ್ಕಾರದಲ್ಲಿ ಅಭಿಜ್ಞರ ನೇರ ಅನುಭವಗಳು’ಲಿವ್‌ಡ್‌ ಎಕ್ಸಿಪೀರಿಯನ್ಸಸ್‌ ಆಫ್‌ ಹಾಸ್ಟಿಟಾಲಿಟಿ ಕನೋಯಿಶರ್ಸ್‌] ನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಶೈಕ್ಷಣಿಕ ಸಾಧನೆಗಾಗಿ ನೀಡುವ ಐಟಿಸಿ ಅಧ್ಯಕ್ಷರ ಚಿನ್ನದ ಪದಕ, ಪ್ರತಿಷ್ಠಿತ ಹಳೆವಿದ್ಯಾರ್ಥಿ ಪ್ರಶಸ್ತಿ -2023 ನ್ನು ಅನುಕ್ರಮವಾಗಿ ಗಿಜು ವರ್ಗೀಸ್‌ ಮತ್ತು ಸುಮಿತಾ ಕೌಲ್‌ ಅವರಿಗೆ ಪ್ರಧಾನ ಮಾಡಲಾಯಿತು.

ಸಾಂಸ್ಕೃತಿಕ ಕಲಾಪಗಳೊಂದಿಗೆ ಮುಕ್ತಾಯಗೊಂಡ ಕಾರ್ಯಕ್ರಮದ ಕೊನೆಗೆ ವಿದ್ಯಾರ್ಥಿಪಾಕತಜ್ಞರು ಸಿದ್ಧಗೊಳಿಸಿದ, ಬಿಕಾನೇರ್‌, ಇಂದೋರ್‌ ಮತ್ತು ಭುವನೇಶ್ವರಗಳ ಪಾಕವೈವಿಧ್ಯವನ್ನು ಸಭಾಸದರು ಸವಿದರು. ಒಟ್ಟಾರೆಯಾಗಿ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಶ್ರೇಷ್ಠತೆ ಮತ್ತು ಸುಸ್ಥಿರ ಅಭಿವೃದ್ಧಿಯ ಉದ್ದೇಶದ ಈಡೇರಿಕೆಗೆ ವಾಗ್ಶದ ಬದ್ಧತೆಯನ್ನು ಎತ್ತಿಹಿಡಿಯಲಾಯಿತು.
 
 

Leave a Reply

Your email address will not be published. Required fields are marked *

error: Content is protected !!