ನರ್ಸಿಂಗ್ ವೃತ್ತಿಯಲ್ಲಿ ಸಹಾನುಭೂತಿ, ಬದ್ಧತೆ ಮುಖ್ಯ: ಡಾ.ಶರತ್ ರಾವ್

ಉಡುಪಿ, ಡಿ.9: ನರ್ಸಿಂಗ್ ಎಂಬುದು ಕೇವಲ ವೃತ್ತಿಯಲ್ಲ. ಅದು ಅಳವಾದ ಸಹಾನುಭೂತಿ. ನೀವು ಮಾಡುವ ಸೇವೆಯು ನಿಮ್ಮ ಬದುಕನ್ನೇ ಬದಲಾಯಿಸ ಬಹುದಾದ ಕ್ಷೇತ್ರವಾಗಿದೆ. ತಮ್ಮ ವೃತ್ತಿಯಲ್ಲಿ ಸಹಾನುಭೂತಿ, ಸಮಗ್ರತೆ ಹಾಗೂ ಬದ್ಧತೆಯಂತಹ ವೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಣಿಪಾಲ ಮಾಹೆಯ ಪ್ರೊ.ವೈಸ್ ಚಾನ್ಸಲೆರ್ ಡಾ.ಶರತ್ ರಾವ್ ಹೇಳಿದ್ದಾರೆ.

ಉಡುಪಿ ಮಿಷನ್ ಕಂಪೌಂಡ್‌ನ ಬಾಷೆಲ್ ಮಿಷನರೀಸ್ ಮೆಮೊರಿಯಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಉಡುಪಿ ಸಿಎಸ್‌ಐ ಲೋಂಬಾರ್ಡ್ ಮೆಮೋರಿಯಲ್(ಮಿಷನ್) ಆಸ್ಪತ್ರೆಯ ಸಮೂಹ ಸಂಸ್ಥೆಯ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಕೌಶಲ್ಯ ಮತ್ತು ಜ್ಞಾನವು ವಿದ್ಯಾರ್ಥಿಗಳನ್ನು ಇನ್ನಷ್ಟು ಎತ್ತರಕ್ಕೆ ಏರಿಸಬಲ್ಲದು. ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿ ಈ ಹಂತಕ್ಕೆ ಬಂದು ತಲುಪಿದ್ದಾರೆ. ಅದೇ ರೀತಿ ಮುಂದೆ ಇನ್ನಷ್ಟು ಸವಾಲುಗಳನ್ನು ಈ ಜಗತ್ತಿನಲ್ಲಿ ಎದುರಿಸಬೇಕಾಗಿದೆ. ಅದಕ್ಕೆಲ್ಲ ಸಿದ್ಧರಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತದ ಬಿಷಪ್ ರೈಟ್ ರೆವೆರೆಂಡ್ ಹೆಮಚಂದ್ರ ಕುಮಾರ್ ಮಾತನಾಡಿ, ಸೈನಿಕರು, ರೈತರು ಮತ್ತು ಪ್ರತಿಯೊಬ್ಬರ ಆರೋಗ್ಯದ ಕಾಳಜಿ ವಹಿಸುವ ದಾದಿಯರು, ವೈದ್ಯರು ಶ್ರಮಪಟ್ಟು ಕೆಲಸ ಮಾಡುವವರು. ಕಲಿಕಾ ಅವಧಿಯಲ್ಲಿ ಪಡೆದ ತರಬೇತಿಯನ್ನು ಸಮಾಜ ಒಳಿತಿಗಾಗಿ, ಅಸ್ವಸ್ಥರ ನೋವಿಗೆ ಸ್ಪಂದಿಸುವ ಮೂಲಕ ಸಮಾಜ ಸೇವೆಗೆ ಬಳಸಿಕೊಳ್ಳಬೇಕು. ಇಂತಹ ಅತ್ಯುತ್ತಮ ಸಂಸ್ಥೆಯಿಂದ ಪಡೆದ ಜ್ಞಾನವು ದೊಡ್ಡ ಸಂಪತ್ತು ಆಗಿದೆ ಎಂದರು.
ಅಧ್ಯಕ್ಷತೆಯನ್ನು ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೆರಿಟ್ ಅವಾರ್ಡ್ ಪ್ರದಾನ ಮಾಡಲಾಯಿತು. ರೆ.ಐವನ್ ಡಿ ಸೋನ್ಸ್ ಪ್ರಾರ್ಥನೆ ನೆರವೇರಿಸಿದರು. ಮಾಲತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾ.ಸುಜಾ ಕರ್ಕಡ ವಾರ್ಷಿಕ ವರದಿ ವಾಚಿಸಿದರು. ಡಾ.ಬಿ.ಎನ್.ಪೆರಲಾಯ ಸ್ವಾಗತಿಸಿದರು. ಡಾ.ಸ್ವೀನಾ ಪ್ರಮೋದ್ ಅತಿಥಿಗಳ ಪರಿಚಯ ಮಾಡಿದರು. ಡಾ.ರೋಶನ್ ಪಾಯಸ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!