ಸಿದ್ದರಾಮಯ್ಯನವರೇ ಕ್ಷುಲ್ಲಕ ರಾಜಕಾರಣ ಬಿಡಿ- ಸಚಿವೆ ಶೋಭಾ ಕರಂದ್ಲಾಜೆ ಕಿಡಿ

ಉಡುಪಿ: ಕೇಂದ್ರ ಸರಕಾರದ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ. ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ರಾಜ್ಯ ಸರ್ಕಾರ ಅಸಹಕಾರ ತೋರಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಿಇಒ ಗಳಿಗೆ ಭಾಗವಹಿಸದಂತೆ ರಾಜ್ಯ ಸರಕಾರ ಮೌಕಿಕ ಆದೇಶ ನೀಡಿದೆ‌. ಇದು ಚೀಫ್ ರಾಜಕೀಯ ಎಂದು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಯಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ. ಅಧಿಕಾರಿಗಳಲ್ಲಿ ರಾಜಕೀಯದ ವಿಷ ಬೀಜ ಬಿತ್ತುವ ಕೆಲಸ ಆಗುತ್ತಿದೆ. ಸಿದ್ದರಾಮಯ್ಯನವರೇ ಕ್ಷುಲ್ಲಕ ರಾಜಕಾರಣ ಬಿಡಿ. ನೀವು ಕೇಂದ್ರದ ಬಳಿ ಬರೋದೇ ಇಲ್ವಾ ನಿಮಗೆ ಯಾವ ಸಹಕಾರನೂ ಬೇಡ್ವಾ?. ಕೇಂದ್ರ ಸರ್ಕಾರದ ಯೋಜನೆ ಬಿಟ್ಟು ಹೋಗಿದ್ದರೆ ಜನರಿಗೆ ತಲುಪಿಸಿ. ಫೆಡರಲ್ ವ್ಯವಸ್ಥೆಯಲ್ಲಿ ಪರಸ್ಪರ ಸಹಕಾರ ಅಗತ್ಯ ಸಿದ್ದರಾಮಯ್ಯನವರೇ ಎಂದು ವಾಗ್ದಾಳಿ ನಡೆಸಿದರು.

ಇದು ಪಕ್ಷದ ಕಾರ್ಯಕ್ರಮವಲ್ಲ, ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಯೋಜನೆ. ಕೇಂದ್ರ ಸರ್ಕಾರದ ಯೋಜನೆಗಳಿಂದ ರಾಜ್ಯಕ್ಕೆ ಅನುಕೂಲ ಆಗಿದೆ. ಜನರಿಗೆ ಆಗುವ ಅನುಕೂಲ ಯಾಕೆ ತಪ್ಪಿಸುತ್ತೀರಿ?. ಕಿಸಾನ್ ಸಮ್ಮಾನ್ ಯೋಜನೆ ನಾವು ಕೊಟ್ಟ ನಾಲ್ಕು ಸಾವಿರ ನಿಲ್ಲಿಸಿದ್ದೀರಿ. ಕೇಂದ್ರ ಕೊಡುವ ಹಣವನ್ನು ರೈತರಿಗೆ ನೀಡಲು ಸಿದ್ಧವಿಲ್ಲ. ಇದನ್ನು ನಾವು ಉಗ್ರವಾಗಿ ವಿರೋಧಿಸುತ್ತೇವೆ ಎಂದರು.

ವಿಧಾನಸಭೆಯಲ್ಲಿ ನಮ್ಮ ಶಾಸಕರು ಇದನ್ನು ವಿರೋಧಿಸುತ್ತಾರೆ‌. ರಾಜ್ಯ ಸರ್ಕಾರದ ಅಧಿಕಾರಿಗಳು ಕಾಂಗ್ರೆಸ್ ಸ್ವತ್ತಲ್ಲ‌. ಯಾವುದೇ ಸರ್ಕಾರ ಬಂದರೂ ಅವರು ಕೆಲಸ ಮಾಡಬೇಕು. ಬ್ಯಾಂಕ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿ ಮಾಡಿ ಕೆಲಸ ಮಾಡುವ ಸ್ಥಿತಿ ಬಂದಿದೆ. ಕೇಂದ್ರ ಸರಕಾರದ ಯೋಜನೆಗಳ ಫಲ ಜನರಿಗೆ ಸಿಗದಿದ್ದರೆ ಅದಕ್ಕೆ ಕಾರಣ ಸಿದ್ದರಾಮಯ್ಯ ಎಂದು ಟೀಕಿಸಿದರು.

ಭ್ರಷ್ಟಾಚಾರಿಗಳ ರಕ್ಷಣೆ ಮಾಡುವುದೇ ಕಾಂಗ್ರೆಸ್‌ನ ನೀತಿ….

ಭ್ರಷ್ಟಾಚಾರಿಗಳ ರಕ್ಷಣೆ ಮಾಡುವ ಉದ್ದೇಶದಿಂದ ನಿರ್ಣಾಯಕ ಹಂತದಲ್ಲಿ ಕೇಸು ವಾಪಸು ಪಡೆದುಕೊಂಡಿದ್ದಾರೆ. ಭ್ರಷ್ಟಾಚಾರಿಗಳ ರಕ್ಷಣೆ ಮಾಡುವುದೇ ಕಾಂಗ್ರೆಸ್‌ನ ನೀತಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆ ಹಿಂಪಡೆದ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿಂದು ಪ್ರತಿಕ್ರಿಯೆ ನೀಡಿದ ಅವರು, ಸಾಕಷ್ಟು ವಿವಾದ ನಡೆದಿದೆ, ಸಾಕಷ್ಟು ವಿಚಾರಣೆ ನಡೆದಿದೆ, ಸಾಕಷ್ಟು ಖರ್ಚು ಆಗಿದೆ. ಇಷ್ಟೊಂದು ಮುಂದುವರಿದ ಸಿಬಿಐ ಕೇಸನ್ನು ಕೈ ಬಿಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ನ್ಯಾಯಾಂಗ, ಸಿಬಿಐ ಇದಕ್ಕೆ ಅವಕಾಶ ಕೊಡಲ್ಲ ಅನ್ನೋ ವಿಶ್ವಾಸ ಇದೆ. ಹೀಗಾಗಿ ಭ್ರಷ್ಟರಿಗೆ ಖಂಡಿತ ಶಿಕ್ಷೆಯಾಗುತ್ತದೆ ಎಂದರು.

ರಾಜ್ಯದಲ್ಲಿ ನಾವು ಕಳ್ಳರ ಕೈಗೆ ಬೀಗದ ಕೈಕೊಟ್ಟಿದ್ದೇವೆ. ರಾಜ್ಯದಲ್ಲಿ ಕಳ್ಳರ ತಂಡ ಕ್ಯಾಬಿನೆಟಿನಲ್ಲಿ ಕೂತಿದೆ. ಅವರೇ ಕೇಸು ವಾಪಸ್ ತಗೊಳ್ತಾರೆ, ಅವರೇ ಜವಾಬ್ದಾರಿ ಹಂಚಿಕೊಳ್ಳುತ್ತಾರೆ. ಅವರೇ ದುಡ್ಡು ತಿಂತಾರೆ ಅವರೇ ಸಂಗ್ರಹ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

error: Content is protected !!