ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ: ಶೋಭಾ ಕರಂದ್ಲಾಜೆ
ಉಡುಪಿ: ನ.30: ದೇಶವನ್ನು ಅಭಿವೃದ್ಧಿಯ ನಿಟ್ಟಿನಲ್ಲಿ ಕೊಂಡೊಯ್ಯಲು ಯೋಜನೆಗಳು ತಲುಪದೇ ಇರುವವರಿಗೆ ತಲುಪಿಸುವುದು ಬಹಳ ಮುಖ್ಯ. ಪ್ರತಿಯೊಂದು ಯೋಜನೆಗೆ ಒಂದು ಉದ್ದೇಶವಿದೆ. ಅದು ಸ್ಟಾರ್ಟ್ ಅಪ್ ಇಂಡಿಯಾ ಇರಬಹುದು ಉಜಾಲ ಯೋಜನೆ ಇರಬಹುದು,ಯಾವುದೇ ಯೋಜನೆ ನಿಜವಾದ ಫಲಾನುಭವಿಯನ್ನು ತಲುಪಿದಾಗ ಅಭಿವೃದ್ಧಿ ಸಾಧ್ಯ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ವಾಹನಕ್ಕೆ ಉಡುಪಿಯ ಅಂಬಲಪಾಡಿ ಗ್ರಾಮ ಪಂಚಾಯತ್ ಆವರಣದಲ್ಲಿ ಚಾಲನೆ ನೀಡಿ ಮಾತನಾಡುತ್ತಿದ್ದರು.
ವಿವಿಧ ಯೋಜನೆಗಳ ಸರಿಯಾದ ಅನುಷ್ಠಾನದ ಮುಖಾಂತರ 2047ರ ಹೊತ್ತಿಗೆ ಭಾರತವನ್ನು ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿ ನೋಡುವ ಸಂಕಲ್ಪದೊಂದಿಗೆ ಯೋಜನೆಗಳನ್ನು ರೂಪಿಸಲಾಗಿದೆ. ವಿಕಸಿತ ಭಾರತ ಸಂಕಲ್ಪ ಯಾತ್ರೆ ಯೋಜನೆಗಳು ತಲುಪದೇ ಇರುವವರಿಗೆ ತಲುಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಅತಿ ದೊಡ್ಡ ಕಾರ್ಯಕ್ರಮ. ಇದು ಪಕ್ಷದ ಕಾರ್ಯಕ್ರಮವಲ್ಲ, ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ರಮ. ನಿಜವಾದ ಫಲಾನುಭವಿ ಗಳಿಗೆ ಯೋಜನೆಗಳನ್ನು ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮೂಲಕ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಗುತ್ತದೆ. ದೇಶದ ಎಲ್ಲ ಗ್ರಾಮ ಪಂಚಾಯಿತಿಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆ ತಲುಪಲಿದೆ. ಅಧಿಕಾರಿಗಳು ಸ್ಥಳದಲ್ಲಿ ಅರ್ಜಿ ಪಡೆದು ಯೋಜನೆಗಳ ಅನುಷ್ಠಾನ ಮಾಡಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಶೆಟ್ಟಿ, ಕೆನರಾ ಬ್ಯಾಂಕ್ ಮಹಾಪ್ರಬಂದಕರು ಎಂ. ಜಿ. ಪಂಡಿತ್, ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಧಾನಿಯವರು ಫಲಾನುಭವಿ ಗಳೊಂದಿಗೆ ನಡೆಸಿದ ಸಂವಾದವನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಲಾಯಿತು. ಕೆನರಾ ಬ್ಯಾಂಕ್ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಎಂ ಪಿಂಜಾರ್ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಮುದ್ರಾ, ಪಿಎಂ ಉಜಾಲ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಯಿತು. ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ನವರಿಂದ ಕೀಟನಾಶಕ ಸಿಂಪಡನೆ ಡ್ರೋನ್ ಪ್ರಾತ್ಯಕ್ಷಿಕೆ ನಡೆಯಿತು.